ಅವೈಜ್ಞಾನಿಕ ವಾರ್ಡ್ ವಿಭಜನೆ- ಡಿಸಿಸಿ ನಾಯಕತ್ವ ಸಭೆ
ಕಾಸರಗೋಡು: ಜಿಲ್ಲೆಯ ಪಂಚಾಯತ್, ನಗರಸಭೆ ವಾರ್ಡ್‌ಗಳಲ್ಲಿ ಜ್ಯಾರಿಗೊಂಡಿರುವ ಕರಡು ವಾರ್ಡ್ ವಿಭಜನೆ ಯಾದಿಯಲ್ಲಿ ರಾಜ್ಯ ವಿಭಜನೆ ಆಯೋಗ ಮಾನದಂಡಗಳನ್ನು ಪೂರ್ಣವಾಗಿ ಉಲ್ಲಂಘಿಸಿ ಅವೈಜ್ಞಾನಿಕ ರೀತಿಯಲ್ಲಿ ಸೀಮೆ ರೇಖೆಗಳನ್ನು ಉಲ್ಲಂಘಿಸಿ, ಜನಸಂಖ್ಯಾ ಲೆಕ್ಕಕ್ಕೆ ಅನುಸಾರವಲ್ಲದೆ ಸಿಪಿಎಂ ಪಕ್ಷದ ನಾಯಕತ್ವ ನಿರ್ದೇಶಿಸಿದ ರೀತಿಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ ವಿಭಜನೆ ನಡೆಸಿರುವುದಾಗಿ ಡಿಸಿಸಿ ನಾಯಕತ್ವ ಸಭೆ ಆರೋಪಿಸಿದೆ. ಈ ಯಾದಿಯನ್ನು ಹಿಂತೆಗೆದು ಅಧಿಕಾರಿಗಳು ರಾಜ್ಯ ಡಿಲಿಮಿಟೇಶನ್ ಸಮಿತಿಯ ಮಾನದಂಡಗಳನ್ನು ಪಾಲಿಸಿ ವಾರ್ಡ್ ವಿಭಜನೆ ನಡೆಸಬೇಕೆಂದು ಇಲ್ಲದಿದ್ದರೆ ಕಾನೂನು ಕ್ರಮದೊಂದಿಗೆ ಮುಂದೆ ಸಾಗುವುದಾಗಿ ಡಿಸಿಸಿ ನಾಯಕತ್ವ ಸಭೆ ತಿಳಿಸಿದೆ. ಡಿಸಿಸಿ ಕಚೇರಿಯಲ್ಲಿ ಜರಗಿದ ಸಭೆಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೋನಿ ಸೆಬಾಸ್ಟಿಯಾನ್ ಉದ್ಘಾಟಿಸಿದರು. ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಅಧ್ಯಕ್ಷತೆ ವಹಿಸಿದರು. ಕೆಪಿಸಿಸಿ ಕಾರ್ಯದರ್ಶಿ ಕೆ. ನೀಲಕಂಠನ್, ಎಂ. ಹಸೈನಾರ್, ರಮೇಶನ್ ಕರುವಾಚ್ಚೇರಿ, ಮೀನಾಕ್ಷಿ ಬಾಲಕೃಷ್ಣನ್, ಕೆ.ಕೆ. ರಾಜೇಂದ್ರನ್ ಸಹಿತ ಹಲವರು ಮಾತನಾಡಿದರು.