ಆಂಬುಲೆನ್ಸ್‌ಗೆ ಸೈಡ್ ನೀಡದೆ ಅಪಾಯಕಾರಿ ರೀತಿಯಲ್ಲಿ ಕಾರು ಚಲಾಯಿಸಿದ ವ್ಯಕ್ತಿಯ ಲೈಸನ್ಸ್ ಅಮಾನತು

ಕಾಸರಗೋಡು: ಆಂಬುಲೆನ್ಸ್‌ಗೆ ಸೈಡ್ ನೀಡದೆ ಅಪಾಯಕಾರಿ ರೀತಿಯಲ್ಲಿ ಕಾರು ಚಲಾಯಿಸಿದ ಯುವಕನ ಲೈಸನ್ಸ್ ಅಮಾನತುಗೊಳಿಸಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಕೊಡುವಳ್ಳಿ ನಿವಾಸಿ ಮುಹಮ್ಮದ್ ಮುಸಮ್ಮಿಲ್ (27) ಎಂಬಾತನ ಲೈಸನ್ಸ್ ಒಂದು ವರ್ಷಕ್ಕೆ ಅಮಾನತುಗೊಳಿಸ ಲಾಗಿದೆ. ಕಳೆದ ಗುರುವಾರ ರಾತ್ರಿ ಕಾಸರಗೋಡು- ಕಾಞಂಗಾಡ್ ಕರಾವಳಿ ರಸ್ತೆಯಲ್ಲಿ ಮುಹಮ್ಮದ್ ಮುಸಮ್ಮಿಲ್ ಚಲಾಯಿಸಿದ ಕಾರು ಆಂಬುಲೆನ್ಸ್‌ನ್ನು ಮುಂದೆ ಹೋಗಲು ಬಿಡದೆ ಅಪಾಯಕಾರಿ ರೀತಿಯಲ್ಲಿ ಸಂಚರಿಸಿರುವುದಾಗಿ ದೂರಲಾಗಿದೆ.

ಆಂಬುಲೆನ್ಸ್‌ನಲ್ಲಿ ಗಂಭೀರ ಸ್ಥಿತಿಯಲ್ಲಿರುವ ರೋಗಿಯನ್ನು ಕಾಞಂಗಾಡ್‌ನ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಗುತ್ತಿತ್ತು. ಆದರೆ ಅದರ ಎದುರು ಸಾಗುತ್ತಿದ್ದ ಕಾರು ಆಂಬುಲೆನ್ಸ್‌ಗೆ ಸೈಡ್ ನೀಡದೆ ಸಮಸ್ಯೆ ಉಂಟು ಮಾಡಿರುವುದಾಗಿ ದೂರಲಾಗಿದೆ. ಮುಹಮ್ಮದ್ ಸಫ್ವಾನ್ ಎಂಬವರ ಕಾರನ್ನು ಮುಹಮ್ಮದ್ ಮುಸಮ್ಮಿಲ್ ಚಲಾಯಿಸಿದ್ದನು.

ಮಂಗಳೂರಿಗೆ ಹೋಗಿ ಮರಳಿ ಬರುತ್ತಿದ್ದ ಕಾರು ಮಡಿಯನ್‌ನಿಂದ ಕಾಞಂಗಾಡ್‌ವರೆಗೆ ಸುಮಾರು ನಾಲ್ಕು ಕಿಲೋಮೀಟರ್ ಆಂಬುಲೆನ್ಸ್‌ಗೆ ಸೈಡ್ ನೀಡಿಲ್ಲವೆನ್ನಲಾಗಿದೆ. ಈ ದೃಶ್ಯ ಸಹಿತ ಆಂಬುಲೆನ್ಸ್ ಚಾಲಕ ಡೈಸನ್ ಡಿಸೋಜ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು.

ಈ ಬಗ್ಗೆ ಕಾಸರಗೋಡು ಎನ್‌ಫೋರ್ಸ್‌ಮೆಂಟ್ ಆರ್‌ಟಿಒ ಪಿ.ರಾಜಶೇಖರನ್ ತನಿಖೆ ನಡೆಸಿ ಮುಹಮ್ಮದ್ ಮುಸಮ್ಮಿಲ್‌ನ ಲೈಸನ್ಸ್ ರದ್ದುಗೊಳಿಸಲು ನಿರ್ಧರಿಸಿದ್ದಾರೆ. ಅದರ ಜೊತೆಗೆ 9000 ರೂಪಾಯಿ ದಂಡ ವಿಧಿಸಿದ್ದಾರೆ. ಅಲ್ಲದೆ ಆತ ಮೋಟಾರ್ ವಾಹನ ಇಲಾಖೆಯ ಐದು ದಿನಗಳ ತರಬೇತಿಯಲ್ಲಿ ಪಾಲ್ಗೊಳ್ಳಬೇಕು.

You cannot copy contents of this page