ಸ್ಕೂಟರ್ಗೆ ಕಾರು ಢಿಕ್ಕಿ ಹೊಡೆಸಿ ವ್ಯಾಪಾರಿ ಕೈಯಿಂದ 2 ಕಿಲೋ ಚಿನ್ನ ದರೋಡೆ
ಕಲ್ಲಿಕೋಟೆ: ಸ್ಕೂಟರ್ನಲ್ಲಿ ಸಂಚರಿಸುತ್ತಿದ್ದ ಚಿನ್ನ ವ್ಯಾಪಾರಿಗೆ ಕಾರು ಢಿಕ್ಕಿ ಹೊಡೆದು ಬೀಳಿಸಿದ ಬಳಿಕ ಅವರ ಕೈಯಲ್ಲಿದ್ದ ೨ ಕಿಲೋ ಚಿನ್ನವನ್ನು ದರೋಡೆಗೈದ ಘಟನೆ ನಡೆದಿದೆ.
ಕಲ್ಲಿಕೋಟೆ ಕೊಡುವಳ್ಳಿಯಲ್ಲಿ ನಿನ್ನೆ ರಾತ್ರಿ 10 ಗಂಟೆಗೆ ಈ ಘಟನೆ ನಡೆದಿದೆ. ಚಿನ್ನ ವ್ಯಾಪಾರಿಯಾದ ಮುತ್ತಂಬಲ ನಿವಾಸಿ ಬೈಜು ಎಂಬವರ ಕೈಯಿಂದ ಚಿನ್ನ ದರೋಡೆ ನಡೆಸಲಾಗಿದೆ. ಬೈಜು ನಿನ್ನೆ ರಾತ್ರಿ ಚಿನ್ನಾಭರಣ ಮಳಿಗೆ ಮುಚ್ಚಿ ಸ್ಕೂಟರ್ನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ದರೋಡೆಕೋರರು ಬಂದ ಕಾರನ್ನು ಸ್ಕೂಟರ್ಗೆ ಢಿಕ್ಕಿ ಹೊಡೆಸಲಾಗಿದೆ. ಇದರಿಂದ ರಸ್ತೆಗೆ ಬಿದ್ದ ಬೈಜುರಿಗೆ ಚಾಕು ತೋರಿಸಿ ಬೆದರಿಸಿ ಚಿನ್ನಾಭರಣ ಕಸಿದು ತಂಡ ಪರಾರಿಯಾಗಿದೆ ಎಂದು ದೂರಲಾಗಿದೆ. ಬಿಳಿ ಸ್ವಿಫ್ಟ್ ಕಾರಿನಲ್ಲಿ ಬಂದ ನಾಲ್ಕು ಮಂದಿಯ ತಂಡ ದರೋಡೆ ನಡೆಸಿದೆ ಎಂದು ಬೈಜು ಪೊಲೀಸರಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಲಭಿಸಿದ ದೂರಿನಂತೆ ಕೇಸು ದಾಖಲಿಸಿಕೊಂಡ ಪೊಲೀಸರು ದರೋಡೆಕೋರರಿಗೆ ಶೋಧ ಆರಂಭಿಸಿದ್ದಾರೆ.