ಚೇಳು ಕಡಿತದಿಂದ ಅಸ್ವಸ್ಥಗೊಂಡ ಯುವಕ ಆಸ್ಪತ್ರೆಯಲ್ಲಿ ಮೃತ್ಯು
ಬೆಳ್ಳೂರು: ಚೇಳು ಕಚ್ಚಿ ಗಂಭೀರ ಅಸ್ವಸ್ಥಗೊಂಡ ಅಡುಗೆ ಕಾರ್ಮಿಕನಾದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ದಾರುಣ ಘಟನೆ ನಡೆದಿದೆ.
ನಾಟೆಕಲ್ಲು ಬಳಿಯ ಕುದ್ವ ಎಂಬಲ್ಲಿನ ದಿ| ರಾಮಣ್ಣ ಎಂಬವರ ಪುತ್ರ ರಾಜೇಶ್ (42) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕಳೆದ ಮಂಗಳವಾರ ರಾತ್ರಿ ಮನೆಯ ಹೊರಗೆ ಹೋಗಿದ್ದ ವೇಳೆ ಅಂಗಳದಿಂದ ರಾಜೇಶ್‌ರಿಗೆ ಚೇಳು ಕಚ್ಚಿರುವುದಾಗಿ ಹೇಳಲಾಗುತ್ತಿದೆ. ಅಲ್ಪ ಹೊತ್ತಿನಲ್ಲೇ ಅವರು ತೀವ್ರ ಅಸ್ವಸ್ಥಗೊಂಡಿದ್ದರು. ಇದರಿಂದ ಕೂಡಲೇ ಮುಳ್ಳೇರಿಯ ಹಾಗೂ ಕಾಸರಗೋಡಿನ ಆಸ್ಪತ್ರೆಗೆ ತಲುಪಿಸಲಾಯಿತು. ಆದರೆ ಸ್ಥಿತಿ ಗಂಭೀರವಾಗಿದ್ದುದರಿಂದ ಬಳಿಕ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಅವರು ಮೃತಪಟ್ಟರು.
ಮೃತದೇಹವನ್ನು ಸ್ವಗೃಹಕ್ಕೆ ತಲುಪಿಸಿ ಅಂತ್ಯಸಂಸ್ಕಾರ ನಡೆಸಲಾಯಿತು. ರಾಜೇಶ್‌ರ ಅಣ್ಣ ಸಂತೋಷ್ ಎಂಬವರು ಮೂರು ತಿಂಗಳ ಹಿಂದೆಯಷ್ಟೇ ಮೃತಪಟ್ಟಿದ್ದರು. ಬೆಂಗಳೂರಿನ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂತೋಷ್ ಹೃದಯಾಘಾತದಿಂದ ನಿಧನ ಹೊಂದಿದ್ದರು. ಇದೀಗ ಸಹೋ ದರನೂ ಮೃತಪಟ್ಟಿರುವುದರಿಂದ ಕುಟುಂಬ ಹಾಗೂ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.ಮೃತ ರಾಜೇಶ್ ತಾಯಿ ಶಶಿಕಲ, ಪತ್ನಿ ಸೌಮ್ಯ, ಒಂದು ಮಗು ಹಾಗೂ ಸಹೋದರಿ ಶಾಲಿನಿ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ