ವಲಸೆ ಕಾರ್ಮಿಕನಿಗೆ ಇರಿತ: ಕೊಲೆಯತ್ನ ಪ್ರಕರಣ ದಾಖಲು
ಕಾಸರಗೋಡು: ವಲಸೆ ಕಾರ್ಮಿಕರಿಗೆ ಇನ್ನೋರ್ವ ವಲಸೆ ಕಾರ್ಮಿಕ ಇರಿದು ಗಂಭೀರ ಗಾಯಗೊಳಿಸಿದ ಘಟನೆ ನಡೆದಿದೆ. ಚೆರ್ಕಳ ಬೇರ್ಕಾ ರಸ್ತೆ ಬಳಿಯ ಕ್ವಾರ್ಟರ್ಸ್ನಲ್ಲಿ ವಾಸಿಸುತ್ತಿರುವ ವಲಸೆ ಕಾರ್ಮಿಕ ಉತ್ತರ ಪ್ರದೇಶ ಬಹರಾಯಿಚ್ ಜಿಲ್ಲೆಯ ಕೈಸರಾ ಗಂಜ್ ನಿವಾಸಿ ಮೊಹಮ್ಮದ್ ಅಮೀ ರ್ ಅನ್ಸಾರಿ (23) ಎಂಬಾತನಿಗೆ ಇರಿಯಲಾಗಿದ್ದು, ಆತನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇದಕ್ಕೆ ಸಂಬಂಧಿಸಿ ಆತ ನೀಡಿದ ದೂರಿನಂತೆ ಅದೇ ಕ್ವಾರ್ಟರ್ಸ್ನ ಇನ್ನೊಂದು ಕೊಠಡಿಯಲ್ಲಿ ವಾಸಿಸು ತ್ತಿರುವ ಉತ್ತರ ಪ್ರದೇಶ ನಿವಾಸಿಯೇ ಆಗಿರುವ ವಲಸೆ ಕಾರ್ಮಿಕ ಅಮಾನ್ ಎಂಬಾತನ ವಿರುದ್ಧ ವಿದ್ಯಾನಗರ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ ಶುಕ್ರವಾರ ರಾತ್ರಿ ಈ ಇಬ್ಬರು ವಾಸಿಸುತ್ತಿರುವ ಕ್ವಾರ್ಟರ್ಸ್ ನಲ್ಲಿ ಈ ಘಟನೆ ನಡೆದಿದೆ. ಅಂದು ರಾತ್ರಿ ದೂರುಗಾರ ಮೊಹಮ್ಮದ್ ಅಮೀರ್ ಅನ್ಸಾರಿಗೆ ಆರೋಪಿ ಕಾಲಿನಿಂದ ಮೆಟ್ಟಿದ್ದನೆಂದೂ ಅದನ್ನು ಪ್ರಶ್ನಿಸಿದ ದ್ವೇಷದಿಂದ ಆತನಿಗೆ ಆರೋಪಿ ಚಾಕುವಿನಿಂದ ಎದೆ, ಭುಜ ಮತ್ತು ಹೊಟ್ಟೆಗೆ ಇರಿದನೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ. ಇದೇ ವೇಳೆ ಆರೋಪಿ ಬಳಿಕ ತಪ್ಪಿಸಿಕೊಂಡಿರುವು ದಾಗಿ ಪೊಲೀಸರು ತಿಳಿಸಿದ್ದು, ಆತನ ಪತ್ತೆಗಾಗಿರುವ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ಗಾಯಾಳು ಅಮೀರ್ ಅನ್ಸಾರಿ ಕಳೆದ ನಾಲ್ಕು ವರ್ಷದಿಂದ ಚೆರ್ಕಳದಲ್ಲಿ ವಾಸಿಸಿ ಜಿಲ್ಲೆಯಲ್ಲಿ ದುಡಿಯುತ್ತಿದ್ದನು. ಆರೋಪಿ ಮೂರು ತಿಂಗಳ ಹಿಂದೆಯಷ್ಟೇ ಇಲ್ಲಿಗೆ ಆಗಮಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ.