ಸ್ವರ್ಗ-ತೂಂಬಡ್ಕ ರಸ್ತೆಯಲ್ಲಿ 1.3 ಕಿ.ಮೀ. ಶೋಚನೀಯ: ದುರಸ್ತಿಗೆ ನಾಗರಿಕರ ಬೇಡಿಕೆ

ಪೆರ್ಲ: ಸ್ವರ್ಗದಿಂದ ತೂಂಬಡ್ಕ ಮೂಲಕ ಆರ್ಲಪದವಿಗೆ ತೆರಳಿ ಸಂಪರ್ಕ ಕಲ್ಪಿಸುವ ಕೇರಳ ವ್ಯಾಪ್ತಿಯಲ್ಲಿರುವ 1.3 ಕಿಲೋ ಮೀಟರ್ ರಸ್ತೆ ಅಭಿವೃದ್ಧಿಗೊಳಗಾಗದೆ ಶೋಚನೀಯಾವಸ್ಥೆಯಲ್ಲಿದೆ. ಎಣ್ಮಕಜೆ ಪಂಚಾಯತ್ ವ್ಯಾಪ್ತಿಯಲ್ಲಿರುವ ಸ್ವರ್ಗ-ತೂಂಬಡ್ಕ ರಸ್ತೆಯನ್ನು ಸುಮಾರು 40 ವರ್ಷಗಳ ಹಿಂದೆ ಸ್ಥಳೀಯರು ನಿರ್ಮಿಸಿದ್ದರು. ಅನಂತರ ಅದನ್ನು ಕರ್ನಾಟಕ ಗಡಿ ತನಕ ತಲುಪಿಸಲಾಗಿದೆ. ಕೇರಳ ಹಾಗೂ ಕರ್ನಾಟಕದ ಗಡಿ ಪ್ರದೇಶದಲ್ಲಿರುವ ಬಂಟಾಜೆ ರಕ್ಷಿತಾರಣ್ಯ ಮೂಲಕ ಹಾದು ಹೋಗುವ ಈ ರಸ್ತೆ ಇದಾಗಿದ್ದು, ಕೇರಳ ಭಾಗದಲ್ಲಿರುವ ರಸ್ತೆಯಲ್ಲಿ ಇದೀಗ ಹೊಂಡಗಳು ತುಂಬಿಕೊಂಡು ವಾಹನಗಳ ಸಂಚಾರಕ್ಕೆ ಅಡಚಣೆ ಎದುರಾಗಿದೆ. ಕಗ್ಗಲ್ಲು ಸಹಿತ ಅಪರಿಮಿತ ಬಾರ ಹೇರಿದ ಲಾರಿಗಳು ಸಂಚರಿಸಿರುವುದೇ ರಸ್ತೆ ಹಾನಿಗೀಡಾಗಲು ಕಾರಣವೆಂದು ನಾಗರಿಕರು ತಿಳಿಸುತ್ತಿದ್ದಾರೆ. ಈ ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆಂದು ನಾಗರಿಕರು ಹಲವು ಬಾರಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಅದ್ಯಾವುದೂ ಪ್ರಯೋಜನವಾಗಲಿಲ್ಲ. ಇದೇ ಸ್ಥಿತಿ ಮುಂದುವರಿದರೆ ರಸ್ತೆಯ ಹೊಂಡ ಇನ್ನಷ್ಟು ಆಳವಾಗಲಿದ್ದು, ಜನಸಂಚಾರಕ್ಕೆ ಪೂರ್ಣ ಅಡಚಣೆ ಉಂಟಾಗಲಿದೆ ಎಂದು ನಾಗರಿಕರು ಆತಂಕವ್ಯಕ್ತಪಡಿಸುತ್ತಿದ್ದಾರೆ.

You cannot copy contents of this page