ಅರ್ಧ ಬೆಲೆಗೆ ಸಾಮಗ್ರಿ ಮಾರಾಟ ಹೆಸರಲ್ಲಿ 1000 ಕೋಟಿ ರೂ.ಗಿಂತಲೂ ಹೆಚ್ಚು ಹಣ ಲಪಟಾವಣೆ
ಕಾಸರಗೋಡು: ತೆರೆದ ಮಾರುಕಟ್ಟೆಗಳಲ್ಲಿರುವ ಬೆಲೆಗಿಂತಲೂ ಶೇ. 50ರಷ್ಟು ದರ ಕಡಿತದಲ್ಲಿ ಸಾಮಗ್ರಿಗಳನ್ನು ಮಾರಾಟ ಮಾಡುವುದಾಗಿ ಭರವಸೆ ನೀಡಿ ರಾಜ್ಯದಾದ್ಯಂತವಾಗಿ ಸಹಸ್ರಾರು ಮಂದಿಯಿಂದ 1000 ಕೋಟಿ ರೂ.ಗಿಂತಲೂ ಹೆಚ್ಚು ಹಣ ಎಗರಿಸಿದ ತಂಡವೊಂದು ರಾಜ್ಯದಲ್ಲಿ ಕಾರ್ಯವೆಸಗುತ್ತಿರುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಇದಕ್ಕೆ ಸಂಬಂಧಿಸಿ ವಂಚನಾ ಜಾಲದ ಪ್ರಧಾನ ಕೊಂಡಿ ಎಂದು ಆರೋಪಿಸಲಾಗುವ ತೊಡುಪುಳ ಕುಡಯತ್ತ್ತೂರು ಕೋಳಪ್ಪಚೂರಂ-ಕುಳಂಗಂ ಅನಂತುಕೃಷ್ಣನ್ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನ ಬ್ಯಾಂಕ್ ಖಾತೆಗೆ 400 ಕೋಟಿ ರೂ. ಬಂದು ಸೇರಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದು, ಅದರಲ್ಲಿ ಮೂರು ಕೋಟಿ ರೂ. ಮಾತ್ರವೇ ಈಗ ಉಳಿದುಕೊಂಡಿ ದೆಯೆಂದು ತನಿಖಾ ತಂಡ ತಿಳಿಸಿದೆ. ಈ ಪ್ರಕರಣದ ತನಿಖೆಯನ್ನು ಕ್ರೈಂಬ್ರಾಂಚ್ ಪೊಲೀಸ್ ವಿಭಾಗ ವಹಿಸಿಕೊಂಡು ಕಾಸರ ಗೋಡು ಸೇರಿದಂತೆ ರಾಜ್ಯವ್ಯಾ ಪಕವಾಗಿ ಎಲ್ಲಾ ಜಿಲ್ಲೆಗಳಿಗೂ ತನಿಖೆ ವಿಸ್ತರಿಸಿದೆ.
ಅರ್ಧ ಬೆಲೆಗೆ ವಿದ್ಯುತ್ ಚಾಲಿತ ಸ್ಕೂಟರ್, ಹೊಲಿಗೆ ಯಂತ್ರ, ಲ್ಯಾಪ್ ಟಾಪ್ ಇತ್ಯಾದಿ ಸಾಮಗ್ರಿಗಳನ್ನು ನೀಡುವುದಾಗಿ ನಂಬಿಸಿ ಸುಮಾರು ೧೦೦೦ ಕೋಟಿ ರೂ.ಗಿಂತಲೂ ಹೆಚ್ಚು ಹಣವನ್ನು ಈ ವಂಚನಾ ಜಾಲ ಲಪಟಾಯಿಸಿದೆಯೆಂದು ಪೊಲೀಸರು ಅಂದಾಜಿಸಿದ್ದಾರೆ. ನಕಲಿ ಎನ್‌ಜಿಒ ಸಂಘಟನೆಯೊಂದರ ಹೆಸರಲ್ಲಿ ಇಂತಹ ವಂಚನೆ ನಡೆಸಲಾಗಿದೆ. ಅರ್ಧ ಬೆಲೆಗೆ ಸಾಮಗ್ರಿಗಳು ಲಭಿಸಲು ಮೊದಲು 6000 ರೂ. ಪಾವತಿಸಿ ಹೆಸರು ನೋಂದಾಯಿಸಬೇಕು. ನಂತರ ಖರೀದಿಸಲು ಉದ್ದೇಶಿಸುವ ಸಾಮಗ್ರಿಗಳ ಅರ್ಧ ಹಣವನ್ನು ಮುಂಗಡವಾಗಿ ಪಾವತಿಸಬೇಕು. ಬಾಕಿ ಶೇ. 50ರಷ್ಟು ಹಣವನ್ನು ಬೃಹತ್ ಕಂಪೆನಿಗಳ ಸಿಎಸ್‌ಆರ್ ಫಂಡ್‌ನಿಂದ ಲಭ್ಯಗೊಳಿಸಲಾಗುವು ದೆಂದು ಭರವಸೆ ನೀಡಿ ಈ ವಂಚನಾ ಜಾಲ ಜನರಿಂದ ಹಣ ಪಡೆದು ವಂಚಿಸುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಈ ಜಾಲದವರು ಹಲವರಿಗೆ ಸಾಮಗ್ರಿಗಳನ್ನು ಪೂರೈಸಿದ್ದರು. ಆ ಮೂಲಕ ಜನರ ವಿಶ್ವಾಸಗಳಿಸಲೆತ್ನಿಸಿ ನಂತರ ಅದೇ ರೀತಿ ಬಳಿಕ ಸಹಸ್ರಾರು ಮಂದಿಯಿಂದ ಹಣ ಪಡೆದು ವಂಚಿಸತೊಡಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಕಣ್ಣೂರು ಜಿಲ್ಲೆಯಿಂದ ಮಾತ್ರವಾಗಿ 2000ದಷ್ಟು ದೂರುಗಳು ಇಂತಹ ವಂಚನೆ ಬಗ್ಗೆ ಪೊಲೀಸರಿಗೆ ಲಭಿಸಿದೆ. ತಿರುವನಂತಪುರ, ಪತ್ತನಂತಿಟ್ಟ, ಎರ್ನಾಕುಳಂ ಮತ್ತು ಇಡುಕ್ಕಿಯಲ್ಲ್ಲೂ ಈ ಬಗ್ಗೆ ನೂರಾರು ಕೇಸುಗಳು ದಾಖಲುಗೊಂಡಿವೆ.
ಈ ವಂಚನಾ ಜಾಲದವರ ಬಲೆಗೆ ಕಾಸರಗೋಡು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವಂಚನೆ ನಡೆಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಅದರಿಂದಾಗಿ ಕ್ರೈಂ ಬ್ರಾಂಚ್ ಪೊಲೀಸರು ತನಿಖೆಯನ್ನು ರಾಜ್ಯಾದ್ಯಂತವಾಗಿ ಎಲ್ಲೆಡೆಗಳಿಗೆ ವಿಸ್ತರಿಸಿದ್ದಾರೆ.