ಅರ್ಧ ಬೆಲೆಗೆ ಸಾಮಗ್ರಿಗಳ ಮಾರಾಟ: 30.59 ಲಕ್ಷ ರೂ. ಎಗರಿಸಿದ ದೂರಿನಂತೆ ಬದಿಯಡ್ಕದಲ್ಲಿ ಕೇಸು ದಾಖಲು
ಬದಿಯಡ್ಕ: ಅರ್ಧ ಬೆಲೆಗೆ ಸಾಮಗ್ರಿಗಳನ್ನು ಮಾರಾಟ ಮಾಡಲಾಗುವುದೆಂದು ನಂಬಿಸಿ ಹಣ ಪಡೆದು ವಂಚನೆಗೈದ ಬಗ್ಗೆ ದೂರೊಂದು ಬದಿಯಡ್ಕ ಪೊಲೀಸ್ ಠಾಣೆಗೂ ಲಭಿಸಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಇದರಂತೆ ಎರ್ನಾಕುಳಂ ರೂರಲ್ ತೊಡುಪುಳದ ಆನಂದಕೃಷ್ಣನ್ ಎಂಬಾತನ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕುಂಬ್ಡಾಜೆ ಮಾರ್ಪನಡ್ಕದಲ್ಲಿ ಕಾರ್ಯವೆಸಗುತ್ತಿರುವ ಮೈತ್ರಿ ಲೈಬ್ರೆರಿ ಆಂಡ್ ರೀಡಿಂಗ್ ರೂಮ್ ಮೂಲಕ ಆ ಕ್ಲಬ್ ಪರಿಸರ ಪ್ರದೇಶಗಳಲ್ಲಿ ವಾಸಿಸುತ್ತಿರುವ 36 ಮಂದಿಗೆ ಅರ್ಧ ಬೆಲೆಗೆ ಸ್ಕೂಟಿ ಹಾಗೂ 36 ಮಂದಿಗೆ ಅರ್ಧ ಬೆಲೆಗೆ ಲ್ಯಾಪ್‌ಟಾಪ್ ನೀಡುವುದಾಗಿ ಭರವಸೆ ನೀಡಿ ಆರೋಪಿ 2024 ಮಾರ್ಚ್ 26ರಿಂದ 2024 ನವೆಂಬರ್ 30ರ ನಡುವಿನ ಅವಧಿಯಲ್ಲಿ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಒಟ್ಟು 30,59,000 ರೂ. ಪಡೆದು ಬಳಿಕ ಸಾಮಗ್ರಿಗಳನ್ನಾಗಲೀ ಪಾವತಿಸಲಾದ ಹಣವನ್ನಾಗಲೀ ಹಿಂತಿರುಗಿಸದೆ ವಂಚನೆ ನಡೆಸಿರುವುದಾಗಿ ಆರೋಪಿಸಿ, ಮಾರ್ಪನಡ್ಕದ ಮೈತ್ರಿ ಲೈಬ್ರೆರಿ ಆಂಡ್ ರೀಡಿಂಗ್ ರೂಮ್‌ನ ಅಧ್ಯಕ್ಷ ಪ್ರಸಾದ್ ಭಂಡಾರಿ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಆ ಬಗ್ಗೆ ಪ್ರಕರಣ ದಾಖಲಿ ತನಿಖೆ ಆರಂಭಿಸಿದ್ದಾರೆ. ಅರ್ಧ ಬೆಲೆಗೆ ಸಾಮಗ್ರಿ ಗಳನ್ನು ನೀಡುವುದಾಗಿ ಹೇಳಿ ವಂಚಿಸಿದ ಬಗ್ಗೆ ಜಿಲ್ಲೆಯಲ್ಲಿ ದಾಖಲಿಸಲಾದ ಮೊದಲ ಪ್ರಕರಣವಾಗಿದೆ ಇದು.