ಗೆಡ್ಡೆ ತೆರವಿಗೆ ಶಸ್ತ್ರಚಿಕಿತ್ಸೆ: ಅಂಡಾಶಯವನ್ನೇ ತೆರವುಗೊಳಿಸಿದ ಬಗ್ಗೆ ದೂರು; ಡಾಕ್ಟರ್ ವಿರುದ್ಧ ಕೇಸು 

ಕಾಸರಗೋಡು: ಗೆಡ್ಡೆ ತೆರವುಗೊಳಿಸಲಿರುವ ಶಸ್ತ್ರ ಚಿಕಿತ್ಸೆ ಮಧ್ಯೆ ಅಂಡಾಶಯವನ್ನೇ ಪೂರ್ಣವಾಗಿ  ಕೊಯ್ದು ತೆಗೆದಿರುವುದಾಗಿ ದೂರಲಾಗಿದೆ. ಯುವತಿ ನೀಡಿದ ದೂರಿನಂತೆ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

ಕೊಳವಯಲಿನ ಕಾಟಾಡಿ ನಿವಾಸಿ   ನೀಡಿದ ದೂರಿನಂತೆ  ನೋರ್ತಾ ಕೋಟಚ್ಚೇರಿ   ಪದ್ಮ ಪೋಲಿಕ್ಲೀನಿಕ್‌ನ  ಡಾ. ರೇಷ್ಮಾ ಸುವರ್ಣರ   ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ.

ಹೊಟ್ಟೆ ನೋವಿನ ಹಿನ್ನೆಲೆಯಲ್ಲಿ ಯುವತಿ ಕ್ಲಿನಿಕ್‌ಗೆ ತೆರಳಿದ್ದಳು. ತಪಾಸಣೆಯಲ್ಲಿ ಬಲಭಾಗದ ಅಂಡಾಶಯದಲ್ಲಿ ಗೆಡ್ಡೆ ಇರುವುದಾಗಿಯೂ ಶಸ್ತ್ರಚಿಕಿತ್ಸೆ ಮೂಲಕ ತೆರವುಗೊಳಿಸಬೇಕೆಂದು  ಡಾಕ್ಟರ್ ತಿಳಿಸಿದ್ದರು. ಇದರಂತೆ ೨೦೨೧ ಸೆಪ್ಟಂಬರ್ ೨೭ರಂದು ಯುವತಿ ಶಸ್ತ್ರಚಿಕಿತ್ಸೆಗೆ  ವಿಧೇಯರಾಗಿದ್ದರು.  ತಿಂಗಳುಗಳು ಕಳೆದ ಬಳಿಕ ಹೊಟ್ಟೆ ನೋವು ಮತ್ತೆ ಕಂಡುಬಂದ ಹಿನ್ನೆಲೆಯಲ್ಲಿ ದೂರುದಾತೆ ಪುನಃ ಡಾಕ್ಟರ್‌ನ್ನು ಸಮೀಪಿಸಿ ಔಷಧಿ ಪಡೆದರಾದರೂ ನೋವು ಶಮನಗೊಳ್ಳಲಿಲ್ಲ.  ೨೦೨೪ ಜನವರಿಯಲ್ಲಿ ಸ್ಕ್ಯಾನ್ ಮಾಡಿದಾಗ ಬಲಭಾಗದ ಅಂಡಾಶಯ ಪೂರ್ಣವಾಗಿ ತೆರವುಗೊಳಿಸಿದ ಬಗ್ಗೆ ತಿಳಿದುಬಂದಿದೆ. ಬಳಿಕ ಶಸ್ತ್ರಚಿಕಿತ್ಸೆ ನಡೆಸಿದ ಡಾಕ್ಟರ್‌ನ್ನು ಭೇಟಿಯಾಗಲು  ಯತ್ನಿಸಿದರಾದರೂ ಅವರು ಊರಲ್ಲಿಲ್ಲ ಎಂಬ ಉತ್ತರ ಆಸ್ಪತ್ರೆಯಿಂದ ಲಭಿಸಿರುವುದಾಗಿ  ದೂರುದಾತೆ ತಿಳಿಸಿದ್ದಾರೆ. ಬಳಿಕ ಮುಖ್ಯಮಂತ್ರಿ, ಆರೋಗ್ಯ ಇಲಾಖೆ ಸಚಿವೆಗೆ ದೂರು ನೀಡಿದ್ದಾರೆ. ಸಚಿವೆಯ ಕಚೇರಿಯಿಂದ ಲಭಿಸಿದ ನಿರ್ದೇಶ ಪ್ರಕಾರ ಯುವತಿ ಹೊಸದುರ್ಗ ಪೊಲೀಸರಿಗೆ ದೂರು ನೀಡಿದ್ದು, ಕೇಸು ದಾಖಲಿಸಿದ್ದಾರೆ. ಇನ್‌ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page