ಪರೀಕ್ಷೆ ಆರಂಭಕ್ಕೆ ನಿಮಿಷಗಳು ಬಾಕಿ: ಪರೀಕ್ಷಾರ್ಥಿಯ ಕೈಯಿಂದ ಹಾಲ್‌ಕಿಟ್ ಕಸಿದು ಹಾರಿದ ಹದ್ದು

ಕಾಸರಗೋಡು: ಪರೀಕ್ಷೆ ಆರಂಭಗೊಳ್ಳಲು ಕೇವಲ ನಿಮಿಷಗಳು ಮಾತ್ರವೇ ಬಾಕಿ ಇರುವಾಗಲೇ ಪರೀಕ್ಷಾ ಕೊಠಡಿಗೆ ತಲುಪಿದ ಹದ್ದು ಪರೀಕ್ಷಾರ್ಥಿಯ ಕೈಯಿಂದ ಹಾಲ್‌ಟಿಕೆಟ್ ಕಸಿದು ಕಚ್ಚಿಕೊಂಡು ಹಾರಿದ ವಿಸ್ಮಯಕಾರಿ ಘಟನೆ ನಡೆಯಿತು. ಇದರಿಂದ ಪರೀಕ್ಷಾರ್ಥಿಯಾದ ಅಧ್ಯಾಪಿಕೆ ಅಲ್ಪ ಹೊತ್ತು ಇನ್ನೇನು ಮಾಡುವುದೆಂದು ತಿಳಿಯದೆ ಗೊಂದಲದಲ್ಲಿ ಸಿಲುಕುವಂತಾಯಿತು. ಆದರೆ ಪುನಃ ಪರೀಕ್ಷಾ ಕೊಠಡಿಯತ್ತ ತಲುಪಿದ  ಹದ್ದು ತನ್ನ ಕಾಲುಗಳಲ್ಲಿ ಬಂಧಿಸಿಟ್ಟಿದ್ದ ಹಾಲ್ ಟಿಕೆಟನ್ನು ಕೆಳಕ್ಕೆ ಹಾಕಿದ್ದು, ಕೂಡಲೇ ಅದನ್ನು ಕೈಗೆತ್ತಿಕೊಂಡ ಅಧ್ಯಾಪಿಕೆ ನಿಟ್ಟುಸಿರು ಬಿಟ್ಟು ಪರೀಕ್ಷೆ ಬರೆದರು.  ಕಾಸರಗೋಡು ಟೌನ್ ಯುಪಿ ಶಾಲೆಯಲ್ಲಿ ಮೊನ್ನೆ ಬೆಳಿಗ್ಗೆ ಈ ಘಟನೆ ನಡೆದಿದೆ

ಮುಖ್ಯೋಪಾಧ್ಯಾಯರ ಹುದ್ದೆಗೆ ಭಡ್ತಿಗೊಳ್ಳಲಿರುವ ಇಲಾಖೆ ಮಟ್ಟದ ಪರೀಕ್ಷೆ ಮೊನ್ನೆ ಬೆಳಿಗ್ಗೆ ಪ್ರಸ್ತುತ ಶಾಲೆಯಲ್ಲಿ ನಡೆಯಿತು. ೭.೩೦ಕ್ಕೆ ಪರೀಕ್ಷೆ ಆರಂಭಗೊಳ್ಳಲಿದ್ದು, ಹಲವರು ಪರೀಕ್ಷಾರ್ಥಿಗಳು ಅಲ್ಲಿಗೆ ತಲುಪಿದ್ದರು. ಪರೀಕ್ಷೆ ಆರಂಭಗೊಳ್ಳಲು ೩೦ ನಿಮಿಷಗಳು ಬಾಕಿಯಿರುವಂತೆಯೇ ಪರೀಕ್ಷಾ ಕೊಠಡಿಗೆ ಹದ್ದೊಂದರ ಆಗಮನವಾಗಿದೆ. ಅಧ್ಯಾಪಿಕೆ ಹಾಲ್ ಟಿಕೆಟ್ ಹಿಡಿದುಕೊಂಡು ಕೊಠಡಿಯತ್ತ ನಡೆದು ಹೋಗುತ್ತಿದ್ದಂತೆ ಅನಿರೀಕ್ಷಿತವಾಗಿ ಅಲ್ಲಿಗೆ ತಲುಪಿದ ಹದ್ದು ಹಾಲ್‌ಟಿಕೆಟನ್ನು ಅವರ ಕೈಯಿಂದ ಕಸಿದು ಕಚ್ಚಿಕೊಂಡು ಹಾರಿದೆ. ಇದರಿಂದ ತೀವ್ರ ಸಂಕಷ್ಟಕ್ಕೊಳಗಾದ ಅಧ್ಯಾಪಿಕೆಗೆ ದಿಕ್ಕು ತೋಚದಂತಾಯಿತು. ಹಾಲ್ ಟಿಕೆಟ್‌ನೊಂದಿಗೆ ಹಾರಿದ ಹದ್ದು ಸಮೀಪದ ಮರದ ಮೇಲೆ ಕುಳಿತಿತ್ತು. ಅದು ಕಾಲುಗಳಲ್ಲಿ ಭದ್ರವಾಗಿರಿಸಿದ್ದ ಹಾಲ್ ಟಿಕೆಟ್‌ನ್ನು ಕೆಳಗೆ ಬೀಳುವಂತೆ ಇತರ ಅಧ್ಯಾಪಕರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಪರೀಕ್ಷೆ ಸಮಯ ಸಮೀಪಿಸುತ್ತಿದ್ದಂತೆ ಹದ್ದು ಹಾಲ್ ಟಿಕೆಟ್‌ನೊಂದಿಗೆ ಮತ್ತೆ ಹಾರಿ ಬಂದು ಶಾಲಾ ಕಚೇರಿಯ ಕಿಟಿಕಿ ಮೇಲೆ ಕುಳಿತಿದೆ. ಅಷ್ಟರಲ್ಲಿ ಅದರ ಕಾಲಿನಲ್ಲಿ ಬಂಧಿಸಿಟ್ಟ ಹಾಲ್ ಟಿಕೆಟ್ ಕೆಳಕ್ಕೆ ಬಿತ್ತು. ಕೂಡಲೇ ಅದನ್ನು ಹೆಕ್ಕಿದ ಅಧ್ಯಾಪಿಕೆ ನಿಟ್ಟುಸಿರು ಬಿಟ್ಟು ಪರೀಕ್ಷೆ ಬರೆದರು.ಶಾಲೆಯಲ್ಲೇ ಖಾಯಂ ವಾಸವಾಗಿರುವ ಹದ್ದು ಈ ಹಿಂದೆಯೂ ಮಕ್ಕಳ  ಪೆನ್ನು ಮತ್ತಿತರ ಕಲಿಕೋಪಕರಣಗಳನ್ನು ಅಪಹರಿಸಿತ್ತೆನ್ನಲಾಗಿದೆ. ಅವುಗಳನ್ನು ಎತ್ತಿಕೊಂಡು ಮರದ ಮೇಲೆ ಕುಳಿತುಕೊಳ್ಳುವ ಹದ್ದು ಅಲ್ಪ ಹೊತ್ತಿನ ಬಳಿಕ ಕೆಳಕ್ಕೆ ಹಾಕುತ್ತದೆ. ಅಧ್ಯಾಪಕರ ಹಾಗೂ ಮಕ್ಕಳೊಂದಿಗೆ ಸ್ನೇಹ ಬೆಳೆಸಿಕೊಂಡ ಹದ್ದು ಇಂತಹ ವರ್ತನೆಗಳಿಂದ ಕೆಲವೊಮ್ಮೆ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಆದರೆ ಇದುವರೆಗೆ ಯಾರಿಗೂ ನೋವುಂಟುಮಾಡಿಲ್ಲವೆಂಬುವುದು ನೆಮ್ಮದಿಯ ಸಂಗತಿಯೆಂದು ಅಧ್ಯಾಪಕರು ತಿಳಿಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page