ಕುಂಬಳೆ ಪೇಟೆಯಿಂದ ಯುವಕನನ್ನು ಹಾಡಹಗಲೇ ಕಾರಿನಲ್ಲಿ ಅಪಹರಿಸಿ 18.46 ಲಕ್ಷ ರೂ. ದರೋಡೆ: ಮೂವರ ವಿರುದ್ಧ ಕೇಸು
ಕುಂಬಳೆ: ಕುಂಬಳೆ ಪೇಟೆಯಿಂದ ಯುವಕನನ್ನು ಹಾಡಹಗಲೇ ತಂಡವೊಂದು ಕಾರಿನಲ್ಲಿ ಅಪಹರಿಸಿ ಕೊಂಡೊಯ್ದು ಹಲ್ಲೆಗೈದು ಚಾಕು ತೋರಿಸಿ ಬೆದರಿಕೆಯೊಡ್ಡಿ 18.46, 127 ರೂಪಾಯಿಗಳನ್ನು ದರೋಡೆಗೈದ ಬಗ್ಗೆ ದೂರಲಾಗಿದೆ. ಕುಂಬಳೆ ಮುಳಿಯಡ್ಕ ರಹ್ಮಾನಿಯ ಮಂಜಿಲ್‌ನ ಅಬ್ದುಲ್ ರಶೀದ್ (32) ಎಂಬವರನ್ನು ತಂಡ ಅಪಹರಿಸಿ ಹಣ ದರೋಡೆ ನಡೆಸಿದೆ. ಈ ಬಗ್ಗೆ ಇವರು ನೀಡಿದ ದೂರಿನಂತೆ ಯೂಸಫ್ ಎಂಬ ವ್ಯಕ್ತಿ ಹಾಗೂ ಕಂಡರೆ ಪತ್ತೆಹಚ್ಚಬಹುದಾದ ಇತರ ಮೂವರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ತಿಂಗಳ 6ರಂದು ಮಧ್ಯಾಹ್ನ ೨.೩೦ರ ವೇಳೆ ಅಪಹರಣ ಘಟನೆ ನಡೆದಿದೆ.
ಕುಂಬಳೆ ಪೇಟೆಯಿಂದ ತನ್ನನ್ನು ಬಲಪ್ರಯೋಗಿಸಿ ಹಿಡಿದು ಫೋರ್ಚುನರ್ ಕಾರಿಗೆ ಹತ್ತಿಸಿದ ಬಳಿಕ ಸೀತಾಂಗೋಳಿ ಭಾಗಕ್ಕೆ ಕೊಂಡೊಯ್ಯಲಾಗಿದೆ. ಬಳಿಕ ದಾರಿ ಮಧ್ಯೆ ಮತ್ತಿಬ್ಬರು ಕಾರಿಗೆ ಹತ್ತಿದ್ದಾರೆ. ಅನಂತರ ಮುಂದೆ ಸಾಗಿದ ಕಾರಿನಲ್ಲಿ ತನಗೆ ಹಲ್ಲೆ ನಡೆಸಿದ್ದು, ಚಾಕು ತೋರಿಸಿ ಬೆದರಿಕೆಯೊಡ್ಡಿ ೧೮ ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಆರೋಪಿಗಳ ಬ್ಯಾಂಕ್ ಖಾತೆಗೆ ಕಳುಹಿಸಿದ ಬಳಿಕ ಸಂಜೆ ೬.೩೦ರ ವೇಳೆ ಪೆರ್ಮುದೆ ಪೇಟೆಯಲ್ಲಿ ಇಳಿಸಿರುವುದಾಗಿ ಅಬ್ದುಲ್ ರಶೀದ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ತೀವ್ರಗೊಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.