ಪೆರಿಯ ಬಳಿ ತ್ಯಾಜ್ಯ ಹೊಂಡದಲ್ಲಿ ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆ: ಸ್ಥಳದಿಂದ ನಾಪತ್ತೆಯಾದ ಯುವಕರು ಹೈದರಾಬಾದ್‌ನಲ್ಲಿ

ಕಾಸರಗೋಡು: ಪೆರಿಯ ನವೋದಯ ನಗರದಲ್ಲಿ ನಿರ್ಮಾಣ ಹಂತದ ಸರ್ವೀಸ್ ಸ್ಟೇಷನ್‌ನ ತ್ಯಾಜ್ಯ ಹೊಂಡದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ ಒಡಿಶ್ಶಾ ನಿವಾಸಿ ಡೆಂಬು (37) ಎಂಬವರೆಂದು ಗುರುತು ಹಚ್ಚಲಾಗಿದೆ. ಬೇಕಲ ಪೊಲೀಸರು ನಡೆಸಿದ ತನಿಖೆಯಲ್ಲಿ ಈ ಬಗ್ಗೆ ತಿಳಿದು ಬಂದಿದೆ.

ಮೃತದೇಹ ಡೆಂಬುರದ್ದೇ ಆಗಿದೆ ಎಂದು ವೈಜ್ಞಾನಿಕವಾಗಿ ಖಚಿತಪಡಿ ಸಲು ಡಿಎನ್‌ಎ ತಪಾಸಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ. ಇದಕ್ಕಾಗಿ ಮೃತವ್ಯಕ್ತಿಯ ಮಗನನ್ನು ಬೇಕಲಕ್ಕೆ ಬರುವಂತೆ ತಿಳಿಸಲಾಗಿದೆ. ಮೇ 16ರಂದು ನವೋದಯ ನಗರದಲ್ಲಿ ನಿರ್ಮಾಣ ಹಂತದ ಸರ್ವೀಸ್ ಸ್ಟೇಷನ್‌ನ ತ್ಯಾಜ್ಯ ಹೊಂಡದಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ಕಾರಣ ತಿಳಿದು ಬಂದಿಲ್ಲ. ರಾಸಾಯನಿಕ ತಪಾಸಣಾ ವರದಿಯಲ್ಲಿ ಕಾರಣ ತಿಳಿಯಲಿದೆ ಎಂದು ಫಾರೆನ್ಸಿಕ್ ವಿಭಾಗ ಪೊಲೀಸರಿಗೆ ತಿಳಿಸಿದೆ. ಇದೇ ವೇಳೆ ಮೃತ ವ್ಯಕ್ತಿಯ ಮೊಣಕಾಲಿಗೆ ಗಂಭೀರ ಗಾಯವಾಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಹೊಂಡಕ್ಕೆ ಬಿದ್ದ ವೇಳೆ ಗಾಯ ಸಂಭವಿಸಿರಬಹುದೆಂದು ಸಂಶಯಿಸ ಲಾಗಿದೆ. ತ್ಯಾಜ್ಯ ಹೊಂಡ ಸಮೀಪ ನಿರ್ಮಾಣ ಹಂತದ ಕಟ್ಟಡ ಸಮುಚ್ಚಯದ ಕೆಲಸಕ್ಕಾಗಿ ಡೆಂಬು ಮೇ ೫ರಂದು ಒಡಿಶ್ಶಾದಿಂದ ಪೆರಿಯಕ್ಕೆ ಬಂದಿರುವುದಾಗಿ ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದು ಬಂದಿದೆ. ಅಂದು ರಾತ್ರಿ ವಾಸ ಸ್ಥಳದಲ್ಲಿ ಮಾನಸಿಕವಾಗಿ ಗೊಂದಲದಲ್ಲಿದ್ದ ಡೆಂಬು ಅತ್ತಿತ್ತ ಓಡಾಡುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ಜೊತೆಗಿದ್ದವರು ಊರಲ್ಲಿರುವ ಮಗನಿಗೆ ಫೋನ್ ಕರೆ ಮಾಡಿ ತಿಳಿಸಿದ್ದರು.

ಈ ವೇಳೆ ಆ ರೀತಿಯಲ್ಲಿ ಡೆಂಬು ವರ್ತಿಸುವುದಿದೆಯೆಂದೂ, ಕೈಕಾಲು ಗಳನ್ನು ಕಟ್ಟಿ ಹಾಕಿದರೆ ಸ್ವಲ್ಪ ಹೊತ್ತಿನಲ್ಲಿ ಸರಿಹೋಗುತ್ತಾರೆಂದು ಪುತ್ರ ತಿಳಿಸಿದ್ದನೆನ್ನಲಾಗಿದೆ. ಇದರಂತೆ ಕೈಕಾಲುಗಳನ್ನು ಕಟ್ಟಿ ವಾಸ ಸ್ಥಳದಲ್ಲಿ ಡೆಂಬುವನ್ನು ಮಲಗಿಸಲಾಗಿತ್ತು. ಆದರೆ ಮರುದಿನ ಮುಂಜಾನೆ ೨ ಗಂಟೆ ವೇಳೆ ಡೆಂಬು ನಾಪತ್ತೆಯಾಗಿದ್ದರು. ಇದರಿಂದ ಜತೆಗಿದ್ದವರು ಹುಡುಕಿದರೂ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಈ ಕಾರಣದಿಂದ ಭಯಗೊಂಡು ಜೊತೆಗಿದ್ದವರು ಕೆಲಸ ಉಪೇಕ್ಷಿಸಿ ವಾಸ ಸ್ಥಳದಿಂದ ಹೈದರಾಬಾದ್‌ಗೆ ಪರಾರಿಯಾಗಿದ್ದರು. ಅವರನ್ನು ಅಲ್ಲಿಂದ ಪತ್ತೆಹಚ್ಚಲಾಗಿದೆ. ಡಿಎನ್‌ಎ ತಪಾಸಣೆಗಾಗಿ ಸ್ಯಾಂಪಲ್ ನೀಡಲು ಮಗ ತಲುಪುವುದರೊಂದಿಗೆ ಹೆಚ್ಚಿನ ಮಾಹಿತಿಗಳು ಲಭಿಸಲಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.

You cannot copy contents of this page