ಪೆರ್ಲ: ಪೆರ್ಲದಿಂದ ಸ್ವರ್ಗ ವಾಣಿನಗರಕ್ಕೆ ಸಾಗುವ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂದು ವಾಹನ ಚಾಲಕರು ತಿಳಿಸಿದ್ದಾರೆ. ಈ ದಾರಿಯಲ್ಲಿ ದಿನವೂ ಒಂದೊಂದು ಮರ ಅಲ್ಲಲ್ಲಿ ಬಿದ್ದು ಬಸ್ ಸಂಚಾರ ಮೊಟಕುಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ರಸ್ತೆಯ ಇಕ್ಕಡೆಗಳಲ್ಲೂ ಮರಗಳ ರೆಂಬೆಗಳು ರಸ್ತೆಗೆ ಬಾಗಿಕೊಂಡಿದ್ದು, ವಾಹನಗಳಿಗೆ ಸೈಡ್ ನೀಡಲು, ಸುಗಮವಾಗಿ ಸಂಚರಿಸಲು ಸಾಧ್ಯವಾಗದ ಸ್ಥಿತಿ ಇದೆ ಎಂದು ದೂರಿದ್ದಾರೆ.
ಬಸ್ ಸಹಿತ ವಾಹನಗಳು ಸಾಗುವಾಗ ಮರದ ರೆಂಬೆಗಳು ವಾಹನಗಳಿಗೆ ತಾಗುತ್ತಿದ್ದು, ಇದರಿಂದ ವಾಹನಗಳಿಗೆ ಹಾನಿಯಾಗುತ್ತಿದೆ ಎಂದು ದೂರಿದ್ದಾರೆ. ದಿನವೂ ಈ ರಸ್ತೆಯಲ್ಲಿ ಸಂಚಾರ ಮೊಟಕಾಗುತ್ತಿದ್ದು, ಇದರಿಂದ ಭಾರೀ ನಷ್ಟ ಉಂಟಾಗುತ್ತಿರುವುದಾಗಿಯೂ ತಿಳಿಸಿದ್ದಾರೆ. ರಸ್ತೆ ಬದಿಯಲ್ಲಿರುವ ಮರಗಳ ರೆಂಬೆಗಳನ್ನು ಕಡಿದು ತೆರವುಗೊಳಿಸದಿದ್ದರೆ ಈ ದಾರಿಯಾಗಿ ವಾಹನ ಸಂಚಾರ ಅಸಾಧ್ಯವಾಗಲಿದೆ ಎಂದು ಹೇಳಲಾಗುತ್ತಿದೆ.