ಕಾಸರಗೋಡು: ಮನೆ ಮಂದಿ ಹಬ್ಬದ ಬಟ್ಟೆಬರೆ, ಮಕ್ಕಳ ಸಮವಸ್ತ್ರ ಖರೀದಿಗೆಂದು ತೆರಳಿದ ಸಮಯದಲ್ಲಿ ಮನೆಗೆ ನುಗ್ಗಿ 22 ಪವನ್ ಚಿನ್ನಾಭ ರಣಗಳನ್ನು ಕಳವುಗೈಯ್ಯಲಾಗಿದೆ. ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಮಾಣಿಯಾಟ್ ಬ್ಯಾಂಕ್ಗೆ ಸಮೀಪದ ನಿವಾಸಿ ಎಂ.ಕೆ. ಜುಸೀಲರ ಮನೆಯಿಂದ ಕಳವು ನಡೆಸಲಾಗಿದೆ. ಜುಸೀಲ ಹಾಗೂ ಕುಟುಂಬ ನಿನ್ನೆ ಸಂಜೆ ಮೂರೂವರೆ ಗಂಟೆಗೆ ಮನೆಗೆ ಬೀಗ ಜಡಿದು ಪಯ್ಯನ್ನೂರಿಗೆ ಶಾಪಿಂಗ್ಗಾಗಿ ತೆರಳಿದ್ದರು. ರಾತ್ರಿ 9.45ರ ವೇಳೆಗೆ ಹಿಂತಿರುಗಿದಾಗ ಕಳವು ನಡೆದ ಬಗ್ಗೆ ತಿಳಿದು ಬಂದಿದೆ. ದ್ವಿಮಹಡಿ ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದು ಕಳ್ಳರು ಒಳಗೆ ಪ್ರವೇಶಿಸಿದ್ದಾರೆ. ಎರಡು ಕಪಾಟುಗಳನ್ನು ಮುರಿದು ನೆಕ್ಲೆಸ್, ಬಳೆಗಳು, ಉಂಗುರಗಳು, ಬೆಂಡೋಲೆ ಎಂಬಿವುಗಳನ್ನು ದೋಚಿದ್ದಾರೆ. ಅಲ್ಲದೆ ಬೀಗ ಜಡಿಯದ ಎರಡು ಕಪಾಟುಗಳಲ್ಲಿನ ಬಟ್ಟೆಬರೆಗಳನ್ನೆಲ್ಲಾ ಚೆಲ್ಲಾಪಿಲ್ಲಿಗೊಳಿಸಿದ್ದಾರೆ. ಮನೆಯ ಹಿಂಭಾಗದ ಗ್ರಿಲ್ಸ್ ಕೂಡಾ ಮುರಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಚಂದೇರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೆ. ಪ್ರಶಾಂತ್ರ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ.







