ಹೆಚ್ಚಿದ ಉತ್ಪಾದನೆ ಖರ್ಚು: ಹೆಚ್ಚದ ಹಾಲಿನ ದರ; ಕೃಷಿಕರು ಸಂಕಷ್ಟದಲ್ಲಿ

ಕಾಸರಗೋಡು: ಉತ್ಪಾದನೆ ಖರ್ಚಿಗೆ ಅನುಸರಿಸಿ ಹಾಲಿಗೆ ಬೆಲೆ ಲಭಿಸದಿರುವುದು ಹೈನುಗಾರಿಕೆ ಕೃಷಿಕರನ್ನು ತೀವ್ರ ಸಂಕಷ್ಟದಲ್ಲಿ ಸಿಲುಕುವಂತೆ ಮಾಡಿದೆ.

ಬೆಲೆ ಸಹಿತ ಸೌಲಭ್ಯಗಳನ್ನು ಹೆಚ್ಚಿಸದಿದ್ದಲ್ಲಿ ಈ ಕೃಷಿಯೊಂದಿಗೆ ಮುಂದೆ ಸಾಗಲು ಸಾಧ್ಯವಿಲ್ಲ ಎಂಬುವುದಾಗಿ ಕೃಷಿಕರು ತಿಳಿಸುತ್ತಿದ್ದಾರೆ. ಹಾಲುತ್ಪಾದನೆಗೆ ತಗಲುವ ಖರ್ಚು ಹಾಗೂ ಕೃಷಿಕರಿಗೆ ಲಭಿಸುವ ಆದಾಯದ ಕುರಿತು ಮಿಲ್ಮಾ ಕೊನೆಯದಾಗಿ 2019ರಲ್ಲಿ ಅಧ್ಯಯನ ನಡೆಸಿತ್ತು. ಆ ಅಧ್ಯಯನ ವರದಿಯಲ್ಲಿ 305 ದಿನ ಹಾಲು ಕರೆಯುವ ಕೃಷಿಕರಿಗೆ ಒಂದು ಲೀಟರ್‌ಗೆ 48.68 ರೂಪಾಯಿ ಉತ್ಪಾದನೆ ಖರ್ಚು ತಗಲುತ್ತದೆ ಎಂದು ತಿಳಿಸಲಾಗಿತ್ತು. ಆದರೆ ಅವರಿಗೆ ಲಭಿಸಿದ ಬೆಲೆ 33.68 ರೂ. ಆಗಿತ್ತು.

ಪ್ರಸ್ತುತ ಒಂದು ಲೀಟರ್ ಹಾಲು ಉತ್ಪಾದಿಸಲು ೬೫ ರೂಪಾಯಿ ಖರ್ಚು ತಗಲುತ್ತದೆ. ಆದರೆ ಕ್ಷೀರ ಸಂಘಗಳಿಂದ 39 ರೂಪಾಯಿಯಿಂದ 43 ರೂಪಾಯಿವರೆಗೆ ಲಭಿಸುತ್ತದೆ. ಈ ಕಾರಣದಿಂದ ಈ ಕೃಷಿ ಮುಂದು ವರಿಸಲಾಗದೆ ಹಲವರು ಅದರಿಂದ ಹಿಂಜರಿದರು. ರಾಜ್ಯದಲ್ಲಿ 13 ಲಕ್ಷ ಹಸುಗಳಿವೆಯೆಂದು ಕ್ಷೀರಾಭಿವೃದ್ಧಿ ಇಲಾಖೆ ಲೆಕ್ಕ ಹಾಕಿದೆ. ಆದರೆ 9 ಲಕ್ಷ ಹಸುಗಳು ಮಾತ್ರವೇ ಇವೆಯೆಂದು ಕೃಷಿಕರು ತಿಳಿಸುತ್ತಿದ್ದಾರೆ. ಹೈನುಗಾರಿಕೆ ಕೃಷಿಕರಲ್ಲಿ ಎರಡು ಅಥವಾ ಮೂರು ಹಸುಗಳಿರುವವರೇ ಹೆಚ್ಚಿನವರು. ಅವರಿಗೆ ಇತರ ಆದಾಯಮಾರ್ಗ ಗಳಿರುವು ದರಿಂದ ಅದನ್ನು ಮುಂದುವರಿಸಲು ಸಾಧ್ಯವಾಗುತ್ತಿದೆ ಎಂದು ಕೇರಳ ಡಯರಿ ಫಾರ್ಮರ್ಸ್  ಅಸೋಸಿ ಯೇಶನ್ ತಿಳಿಸಿದೆ.

ಹಾಲಿನ ಬೆಲೆ 70 ರೂ.ಗೆ ಹೆಚ್ಚಿಸ ಬೇಕು, ಬೆಲೆ ನಿಗದಿಪಡಿಸುವ ಚಾರ್ಟ್ ಪರಿಷ್ಕರಿಸಬೇಕು ಮುಂತಾದ ಬೇಡಿಕೆ ಗಳನ್ನು ಮುಂದಿರಿಸಿಕೊಂಡು ಕಲ್ಲಿಕೋಟೆ ಮೃಗ ಸಂರಕ್ಷಣೆ ಶ್ರೀರಾಭಿವೃದ್ಧಿ ಕಚೇರಿ ಮುಂದೆ ಕೃಷಿಕರು ಇಂದು ಧರಣಿ ನಡೆಸುವುದಾಗಿ ತಿಳಿಸಲಾಗಿದೆ.

RELATED NEWS

You cannot copy contents of this page