ಬಾವಿಕ್ಕೆರೆಯಲ್ಲಿ ಮತ್ತೆ ಚಿರತೆ ಕಾಟ: ನಾಯಿ ಬಲಿ; ಕಾರಡ್ಕದಲ್ಲಿ ಮೂರು ಚಿರತೆಗಳನ್ನು ಕಂಡಿರುವುದಾಗಿ ಊರವರು
ಬೋವಿಕ್ಕಾನ: ಇಲ್ಲಿಗೆ ಸಮೀಪದ ಬಾವಿಕ್ಕೆರೆ ಅಮ್ಮಂಗಲ್ಲು ಎಂಬಲ್ಲಿ ಚಿರತೆ ಕಾಟ ತಲೆಯೆತ್ತಿದ್ದು, ಸಾಕುನಾಯಿಗಳನ್ನು ಕೊಂದು ಹಾಕಿದೆ. ಅಮ್ಮಂಕಲ್ಲಿನ ಸಿಂಧು ಎಂಬವರ ಮನೆಯ ಸಾಕು ನಾಯಿಯನ್ನು ಚಿರತೆ ಕಚ್ಚಿ ಕೊಂದಿದೆ. ನಾಯಿಯನ್ನು ಕೊಂದು ಅದರ ಕರುಳು ಹೊರ ಬಂದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಾಯಿಯನ್ನು ಮನೆಯ ಗೂಡಿನ ಹೊರಗೆ ಸಂಕೋಲೆಯಿಂದ ಕಟ್ಟಿ ಹಾಕಿರುವುದರಿಂದ ಅದನ್ನು ಕಚ್ಚಿ ಸಾಗಿಸಲು ಚಿರತೆಗೆ ಸಾಧ್ಯವಾಗಲಿಲ್ಲ. ರಾತ್ರಿ ಧಾರಾಕಾರ ಮಳೆ ಸುರಿಯುತ್ತಿದ್ದ ವೇಳೆ ನಾಯಿ ಬೊಳಗುವಿಕೆ ಮನೆಯವರಿಗೆ ಕೇಳಿಸಿರಲಿಲ್ಲ. ಮನೆಯವರು ಬೆಳಿಗ್ಗೆ ಎದ್ದು ಹೊರಬಂದಾಗಲಷ್ಟೇ ನಾಯಿ ಸತ್ತು ಬಿದ್ದ ಸ್ಥಿತಿಯಲ್ಲಿ ಕಂಡುಬಂದಿದೆ. ಮನೆ ಪಕ್ಕದ ಮಣ್ಣಿನಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಗೋಚರಿಸಿದೆ. ಈ ಪ್ರದೇಶದಲ್ಲಿ ಚಿರತೆ ದಾಳಿ ಉಂಟಾಗಿರುವುದು ಇದೇ ಮೊದಲ ಬಾರಿಯಾಗಿದೆಯೆಂದು ಪ್ರದೇಶ ನಿವಾಸಿಗಳು ಹೇಳುತ್ತಿದ್ದಾರೆ.
ವಿಷಯ ತಿಳಿದ ಅರಣ್ಯ ಇಲಾಖೆಯ ಆರ್ಆರ್ಟಿ ತಂಡ ಮತ್ತು ಉಪರೇಂಜ್ ಆಫೀಸರ್ ಎನ್.ಎ ಸತ್ಯನ್, ಸೆಕ್ಷನ್ ಆಫೀಸರ್ಗಳಾದ ಎ.ಕೆ. ಬಾಬು, ಕೆ. ಜಯ ಕುಮಾರ್ ಸ್ಥಳಕ್ಕಾಗಮಿಸಿ ಪರಿಶೀಲಿಸಿದರು. ನಾಯಿಯನ್ನು ಕೊಂದದ್ದು ಚಿರತೆಯೇ ಆಗಿರುವುದಾಗಿ ಅವರು ದೃಢೀಕರಿಸಿದ್ದಾರೆ. ಈ ಪರಿಸರದಲ್ಲಿ ಈಗ ಸಿಸಿ ಟಿವಿ ಕ್ಯಾಮರಾವನ್ನು ಅಳವಡಿಸಲಾಗಿದೆ.
ಕಳೆದ ಫೆಬ್ರವರಿ ೨೩ ಮತ್ತು ಮಾರ್ಚ್ ೨೬ರಂದು ಕೊಳತ್ತೂರು ಆವಲುಂಗಾಲ್ನಲ್ಲಿ ಎರಡು ಚಿರತೆಗಳನ್ನು ಅರಣ್ಯ ಪಾಲಕರು ಗೂಡು ಸ್ಥಾಪಿಸಿ ಸೆರೆಹಿಡಿದಿದ್ದರು. ಬಳಿಕ ಚಿರತೆ ದಾಳಿ ಉಂಟಾಗಿರುವುದು ಇದೇ ಮೊದಲ ಬಾರಿಯಾಗಿದೆ. ಈ ಪ್ರದೇಶದಲ್ಲಿ ಹಲವುಬಾರಿ ಚಿರತೆಗಳನ್ನು ನಾವು ಕಂಡಿದ್ದೇವೆಂದು ಊರವರು ಹೇಳುತ್ತಿದ್ದಾರೆ.
ಒಂದು ವಾರದ ಹಿಂದೆ ರಾತ್ರಿ ಚೆಂಬಿಲಕೈಯ ಇ.ಬಿ ಕೃಷ್ಣ ರಾಜ್ರ ಮನೆಯ ನಾಯಿಗೆ ಚಿರತೆ ದಾಳಿ ನಡೆಸಿತ್ತು. ನಾಯಿಯ ಬೊಬ್ಬೆ ಕೇಳಿ ಮನೆಯವರು ಹೊರಬಂದು ಬೆಳಕು ಹಾಯಿಸಿದಾಗ ಚಿರತೆ ಅಲ್ಲಿಂದ ಪರಾರಿಯಾಗಿತ್ತು. ನಾಯಿಯ ಕುತ್ತಿಗೆಗೆ ಗಂಭೀರ ಗಾಯವುಂಟಾಗಿತ್ತು.
ಇದೇ ಸಂದರ್ಭದಲ್ಲಿ ಕಾರಡ್ಕ ಹದಿಮೂರನೇ ಮೈಲಿನಲ್ಲಿ ನಿನ್ನೆ ರಾತ್ರಿ ಸುಮಾರು 8.30ಕ್ಕೆ ಮೂರು ಚಿರತೆಗಳನ್ನು ಕಂಡಿರುವುದಾಗಿ ಊರವರು ತಿಳಿಸಿದ್ದಾರೆ. ಇದು ಅಲ್ಲೇ ಪಕ್ಕದ ಅರಣ್ಯದಿಂದ ರಸ್ತೆಗಿಳಿದು ನಂತರ ಮತ್ತೆ ಕಾಡಿಗೆ ತೆರಳಿದೆ ಎಂದು ಪರಿಸರ ನಿವಾಸಿಗಳು ತಿಳಿಸಿದ್ದಾರೆ.