ತೃಕನ್ನಾಡು ರಸ್ತೆ ಪುನರ್ ನಿರ್ಮಾಣಕ್ಕೆ ಚಾಲನೆ ನೀಡಿಲ್ಲ: ಸ್ಥಳೀಯರಿಂದ ಪ್ರತಿಭಟನೆಗೆ ಸಿದ್ಧತೆ
ಬೇಕಲ: ತೀವ್ರ ಮಳೆ ಹಾಗೂ ಕಡಲ್ಕೊರೆತದಿಂದಾಗಿ ಕಾಸರಗೋಡು- ಕಾಞಂಗಾಡ್ ರಾಜ್ಯ ಹೆದ್ದಾರಿಯ ಬದಿ ಕುಸಿದ ತೃಕನ್ನಾಡ್ ರಸ್ತೆ, ಕುಡುಂಗಲ್ಲೂರು ಮಂಟಪ ಸಂರಕ್ಷಣೆಗಿರುವ ನಿರ್ಮಾಣ ಚಟುವಟಿಕೆಗಳು ಇನ್ನೂ ಆರಂಭಗೊಂಡಿಲ್ಲ. ಮಳೆ ಹಾಗೂ ಕಡಲ್ಕೊರೆತ ಮುಂದುವರಿದರೆ ತೃಕನ್ನಾಡ್ ರಾಜ್ಯ ಹೆದ್ದಾರಿ ಸಂಪೂರ್ಣ ಕುಸಿದು ಸಾರಿಗೆ ಮೊಟಕುಗೊಳ್ಳಲಿದೆ ಎಂಬ ಆತಂಕ ಮುಂದುವರಿಯುತ್ತಿದೆ. ತೃಕನ್ನಾಡ್ ಕ್ಷೇತ್ರಕ್ಕೆ ದಿನವೂ ವಿವಿಧ ಕಾರ್ಯಕ್ರಮಗಳಿಗಾಗಿ ತಲುಪುವವರು ಸಹಿತ ಇದರಿಂದ ಸಮಸ್ಯೆಗೊಳಗಾಗುವರು.
ಕರ್ಕಾಟಕ ಅಮವಾಸ್ಯೆ ದಿನದಂದು ಸಾವಿರಾರು ಮಂದಿ ಇಲ್ಲಿ ಪಿತೃತರ್ಪಣೆಗೆ ತಲುಪುತ್ತಿದ್ದಾರೆ. ಕಡಲ್ಕೊರೆತದಿಂದ ಹಾನಿಗೊಂಡ ಕೊಡುಂಗಲ್ಲೂರು ಮಂಟಪ ಸಂರಕ್ಷಿಸುವುದರಲ್ಲಿ ಅಧಿಕಾರಿಗಳು ಉದಾಸೀನತೆ ತೋರುತ್ತಿದ್ದಾರೆಂದು ಆರೋಪಿಸಿ ಸ್ಥಳೀಯರು ಅಧಿಕಾರಿಗಳೊಂದಿಗೆ ಅಸಹಕಾರವಾಗಿ ವರ್ತಿಸುತ್ತಿದ್ದಾರೆ. ಅಧಿಕಾರಿಗಳು ಗುರುವಾರ ಸಂಜೆ ಕರ್ನಾಟಕದಿಂದ ತಂದ ಕಗ್ಗಲ್ಲುಗಳನ್ನು ಇಳಿಸಲು ಬಿಡದೆ ಸ್ಥಳೀಯರು ಹಿಂತಿರುಗಿಸಿದ್ದಾರೆ. ಚಿಕ್ಕ ಗಾತ್ರದ ಕಗ್ಗಲ್ಲುಗಳು ಸಮುದ್ರದ ನೀರುಪಾಲಾಗಬಹುದೆಂದು ಗೋಪುರವನ್ನು ಸಂರಕ್ಷಿಸಲು ಇದರಿಂದ ಸಾಧ್ಯವಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಇದು ರಸ್ತೆಯ ಬದಿಯಲ್ಲಿ ಕುಸಿದು ಉಂಟಾದ ಹೊಂಡವನ್ನು ತುಂಬಿಸಲು ತಂದಿರುವುದಾಗಿಯೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಒಂದೂವರೆ ತಿಂಗಳಿಂದ ತೃಕನ್ನಾಡ್ ಪ್ರದೇಶದಲ್ಲಿ ಉಂಟಾಗುತ್ತಿರುವ ನಾಶನಷ್ಟಗಳನ್ನು ಸರಕಾರ ಹಾಗೂ ಜನಪ್ರತಿನಿಧಿಗಳು ಕಂಡೂ ಮೌನ ವಹಿಸುತ್ತಿರುವುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ. ಮಂಟಪ, ಬಸ್ ತಂಗುದಾಣ, ಸಮೀಪದ ಅಂಗಡಿ ಎಂಬಿವುಗಳಿಗೆ 13 ಲಕ್ಷ ರೂ. ಮೀಸಲಿಟ್ಟಿರುವುದಾಗಿ ತಿಳಿಸಲಾಗಿದ್ದರೂ ಯಾವುದೇ ಚಟುವಟಿಕೆ ಇಲ್ಲಿ ನಡೆದಿಲ್ಲ. ಅಗತ್ಯದ ಕಗ್ಗಲ್ಲು ತಂದಿಳಿಸಲು ಕರಾರುದಾರರು ಲಭಿಸುತ್ತಿಲ್ಲವೆಂದು ಹೇಳಲಾಗುತ್ತಿದೆ. ರಸ್ತೆಯ ಬದಿ ಕುಸಿದಿರುವುದನ್ನು ದುರಸ್ತಿಗೊಳಿಸಬೇಕೆಂದು ಸಹಿತ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ರಸ್ತೆ ದಿಗ್ಬಂಧನ, ಅನಿರ್ದಿಷ್ಟ ಕಾಲ ಮುಷ್ಕರ ಆರಂಭಿಸಲು ಬೇಕಲ ಕೋಟಿಕುಳಂ ಕುರುಂಬಾ ಭಗವತಿ ಕ್ಷೇತ್ರ ಆಡಳಿತ ಸಮಿತಿ ಹಾಗೂ ಸ್ಥಳೀಯರು ತೀರ್ಮಾನಿಸಿದ್ದಾರೆ.
ತೃಕನ್ನಾಡು ಕ್ಷೇತ್ರದಿಂದ ರಾಜ್ಯ ಹೆದ್ದಾರಿಯ ಪಶ್ಚಿಮ ಭಾಗದಲ್ಲಿ ಸಮಾನಾಂತರವಾಗಿ ಬೇಕಲ ಸೇತುವೆ ವರೆಗೆ ಚರಂಡಿ ನಿರ್ಮಿಸಬೇಕು, ಕ್ಷೇತ್ರದ ಮುಂಭಾಗದ ಸಮುದ್ರ ತೀರದಲ್ಲಿ ಬಿತ್ತಿ ನಿರ್ಮಿಸಬೇಕು ಮೊದಲಾದವು ಇವರ ಬೇಡಿಕೆಯಾಗಿದೆ. ಮುಷ್ಕರವನ್ನು ಮುಂದೂಡಬೇ ಕೆಂದು ನಾಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯರ ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ಕಾಣುವುದಾಗಿಯೂ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ನಾಳೆ ಈ ಚರ್ಚೆಯಲ್ಲಿ ಉಂಟಾಗುವ ತೀರ್ಮಾ ನದಂತೆ ಮುಷ್ಕರ ಕ್ರಮಗಳೊಂದಿಗೆ ಮುಂದುವರಿ ಯುವುದಾಗಿ ಬೇಕಲ, ಕೋಟಿಕುಳಂ ಕುರುಂಬಾ ಭಗವತೀ ಕ್ಷೇತ್ರ ಆಡಳಿತ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.