ಪೆರಿಯ ಅವಳಿ ಕೊಲೆ ಪ್ರಕರಣ : ಓರ್ವ ಆರೋಪಿಗೆ ಪರೋಲ್ ಮಂಜೂರು ಮಾಡಿದ ಸರಕಾರ
ಕಾಸರಗೋಡು: ಪೆರಿಯ ಕಲ್ಯೋಟ್ನಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಶರತ್ಲಾಲ್ ಮತ್ತು ಕೃಪೇಶ್ ಎಂಬುರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಎರ್ನಾಕುಳಂ ಸಿಬಿಐ ವಿಶೇಷ ನ್ಯಾಯಾಲಯದಿಂದ ಅವಳಿ ಜೀವಾವಧಿ ಶಿಕ್ಷೆಗೊಳಗಾದ 10 ಮಂದಿ ಆರೋಪಿಗಳ ಪೈಕಿ ಎಂಟನೇ ಆರೋಪಿಗೆ ರಾಜ್ಯ ಸರಕಾರ ಪರೋಲ್ ಮಂಜೂರು ಮಾಡಿದೆ. ಸುಭೀಶ್ ವೆಳುತ್ತೋಳಿ ಎಂಬಾತನಿಗೆ ಮಂಜೂರು ಮಾಡಲಾಗಿದೆ.
ತನಗೆ ನೀಡಲಾದ ಶಿಕ್ಷೆಯನ್ನು ಅಮಾನತುಗೊಳಿಸಬೇಕೆಂದು ಕೋರಿ ಆರೋಪಿ ಸುಭೀಶ್ ಈ ಹಿಂದೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದನ. ಆ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಅದರ ಬೆನ್ನಲ್ಲೇ ಸರಕಾರ ಆತನಿಗೆ ಈಗ 20 ದಿನಗಳಿಗೆ ಪರೋಲ್ ಮಂಜೂರು ಮಾಡಿದೆ. ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯೊಳಗೆ ಪ್ರವೇಶಿಸಬಾರದೆಂಬ ನಿಬಂಧನೆಯನ್ನು ಪರೋಲ್ನಲ್ಲಿ ಹೇರಲಾಗಿದೆ. ಸುಭೀಶ್ಗೆ ಪರೋಲ್ ಮಂಜೂರು ಮಾಡಿರುವುದನ್ನು ಪ್ರತಿಭಟಿಸಿ ಇನ್ನೊಂದೆಡೆ ಕಾಂಗ್ರೆಸ್ ಹಾಗೂ ಕೃಪೇಶ್ ಮತ್ತು ಶರತ್ಲಾಲ್ನ ಮನೆಯವರೂ ಈಗ ರಂಗಕ್ಕಿಳಿದಿದ್ದಾರೆ.