ಬೋವಿಕಾನ: ಬೈಕ್ ಅಪಘಾತಕ್ಕೀಡಾಗಿ ಯುವ ಇಂಜಿನಿಯರ್ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಬೇತೂರುಪಾರ ತೀರ್ಥಂಗರದ ಎ. ವಿಜಯನ್ ತೀರ್ಥಂಕರ- ಎಂ. ಶಾಲಿನಿ ದಂಪತಿ ಪುತ್ರ ಎಂ. ಜಿತೇಶ್ (23) ಸಾವನ್ನಪ್ಪಿದ ದುರ್ದೈವಿ. ಇವರು ನಿನ್ನೆ ಮಧ್ಯಾಹ್ನ ಬೈಕ್‌ನಲ್ಲಿ ಬೋವಿಕ್ಕಾನದಿಂದ ಬೇತೂರುಪಾರಕ್ಕೆ ಹೋಗುತ್ತಿದ್ದ ದಾರಿ ಮಧ್ಯೆ ಮಂಜಕಲ್ ಬಸ್ ತಂಗುದಾಣದ ಬಳಿ ತಲುಪಿದಾಗ ಆಟೋರಿಕ್ಷಾವೊಂದನ್ನು ಓವರ್‌ಟೇಕ್ ಮಾಡಲೆತ್ನಿಸಿದಾಗ ಬೈಕ್ ನಿಯಂತ್ರಣ ತಪ್ಪಿ ಬಸ್ ತಂಗುದಾಣದ ಕಂಬಕ್ಕೆ ಬಡಿದಿದೆ. ಇದರಿಂದ ಗಂಭೀರ ಗಾಯಗೊಂಡ ಜಿತೇಶ್‌ನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ನಂತರ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು. ಆದೂರು ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎರೋನಾಟಿಕಲ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಜಿತೇಶ್ ಓಣಂ ರಜೆಗೆ ಊರಿಗೆ ಬಂದಿದ್ದರು. ಮಾತ್ರವಲ್ಲ ಅವರು ನಿನ್ನೆ ಪುನಃ ಬೆಂಗಳೂರಿಗೆ ಹಿಂತಿರುಗುವ ಸಿದ್ಧತೆಯಲ್ಲೂ ತೊಡಗಿದ್ದರು. ಈ ಮಧ್ಯೆ ಈ ದಾರುಣ ಘಟನೆ ನಡೆದಿದೆ. ಮೃತ ಜಿತೇಶ್ ಹೆತ್ತವರ ಹೊರತಾಗಿ ಸಹೋದರ ಎಂ. ಜಿಷ್ಣು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.