ಕಾಸರಗೋಡು: ಸರಕು ಲಾರಿ ಯೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ಸೇರಿದಂತೆ 12 ದ್ವಿಚಕ್ರವಾಹನಗಳು ಮತ್ತು ಸಿಗ್ನಲ್ ಲೈಟುಕಂಬಗಳಿಗೆ ಢಿಕ್ಕಿ ಹೊಡೆದು ಅವುಗಳನ್ನು ನಜ್ಜುಗುಜ್ಜುಗೊಳಿಸಿದ ಘಟನೆ ಮೊಗ್ರಾಲ್ ಪುತ್ತೂರಿಗೆ ಸಮೀಪದ ಎರಿಯಾಲ್ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯ ಅಂಡರ್ ಪ್ಯಾಸೇಜ್ ಬಳಿ ನಿನ್ನೆ ಬೆಳಿಗ್ಗೆ ನಡೆದಿದೆ. ಈ ಅಪಘಾತದ ವೇಳೆ ಆ ರಸ್ತೆಯಲ್ಲಿ ಯಾರೂ ಇಲ್ಲದೇ ಇದ್ದುದರಿಂದಾಗಿ ಸಂಭಾವ್ಯ ಭಾರೀ ದೊಡ್ಡ ಅನಾಹುತ ಅದೃಷ್ಟವಶಾತ್ ತಪ್ಪಿ ಹೋಗಿದೆ. ಕರ್ನಾಟಕದ ಹುಬ್ಬಳ್ಳಿ ಯಿಂದ ಸರಕು ಹೇರಿಕೊಂಡು ಕಲ್ಲಿಕೋ ಟೆಗೆ ಹೋಗುತ್ತಿದ್ದ ಲಾರಿ ಈ ಅವಾಂತರ ಸೃಷ್ಟಿಸಿದೆ. ಲಾರಿ ಚಲಾಯಿಸುವ ವೇಳೆ ಅದರ ಚಾಲಕ ನಿದ್ರಿಸಿರುವುದೇ ಈ ಅಪ ಘಾತಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯ ಬಳಿ ಬಾಡಿಗೆ ಕಟ್ಟಡಗಳಲ್ಲಿ ವಾಸಿಸುತ್ತಿರುವ ಹೊರರಾಜ್ಯ ಕಾರ್ಮಿಕರು ಈ ರಸ್ತೆ ಬದಿ ಸಾಲಾಗಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಮೇಲೆ ಈ ಲಾರಿ ಹರಿದಿದೆ. ಇದರಿಂದ ಲಕ್ಷಾಂತರ ರೂ.ಗಳ ನಷ್ಟ ಉಂಟಾಗಿದೆ. ಮಾತ್ರವಲ್ಲ ವಿದ್ಯುನ್ಮಂಡಳಿಯ ಕಂಬಗಳೂ ಮುರಿದು ಬಿದ್ದಿವೆ. ಈ ಅಪಘಾತದಲ್ಲಿ ತಮಗೆ 1,06,397 ರೂ.ಗಳ ನಷ್ಟ ಉಂಟಾಗಿದೆ ಎಂದು ಇನ್ನೊಂದೆಡೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಗುತ್ತಿಗೆ ಸಂಸ್ಥೆಯ ಅಧಿಕಾರಿಗಳು ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಅಪಘಾತಕ್ಕೆ ಸಂಬಂಧಿಸಿ ಢಿಕ್ಕಿ ಹೊಡೆದ ಲಾರಿ ಚಾಲಕ ಕರ್ನಾಟಕ ಬಾಗಲಕೋಟೆ ನಿವಾಸಿ ಶಬೀರ್ ಅಹಮ್ಮದ್ ಸಾಗರ್‌ನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
