ಕುಂಬಳೆ: ಸೀತಾಂಗೋಳಿ ಪೇಟೆಯಲ್ಲಿ ಯುವಕನಿಗೆ ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ಮುಖ್ಯ ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಲಾಗಿದೆ. ನೀರ್ಚಾಲು ಬೇಳ ಚೌಕಾರು ನಿವಾಸಿ ಅಕ್ಷಯ್ (34) ಎಂಬಾತನನ್ನು ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಕೆ. ಜಿಜೀಶ್, ಎಸ್‌ಐ ಕೆ. ಶ್ರೀಜೇಶ್ ಎಂಬಿವರು ಸೆರೆ ಹಿಡಿದಿದ್ದಾರೆ. ಇತರ 12 ಮಂದಿ ಆರೋಪಿಗಳಿಗಾಗಿ ತನಿಖೆ ತೀವ್ರಗೊಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೊನ್ನೆ ರಾತ್ರಿ 11.30ರ ವೇಳೆ ಪ್ರಕರಣಕ್ಕೆ ಕಾರಣವಾದ ಘಟನೆ ಸೀತಾಂಗೋಳಿಯಲ್ಲಿ ನಡೆದಿದೆ. ಬದಿಯಡ್ಕದಲ್ಲಿ ಮೀನು ಮಾರಾಟಗಾ ರನಾದ ಅನಿಲ್ ಕುಮಾರ್‌ರನ್ನು ಇರಿದು ಕೊಲೆಗೈಯ್ಯಲೆತ್ನಿಸಲಾಗಿದೆ. ಹಣಕಾಸಿನ ವಿವಾದಕ್ಕೆ ಸಂಬಂಧಿಸಿ ಚರ್ಚೆಗಾಗಿ ಅನಿಲ್ ಕುಮಾರ್ ಸೀತಾಂಗೋಳಿಗೆ ತಲುಪಿದ್ದರು. ಈ ವೇಳೆ ಅಕ್ಷಯ್ ನೇತೃತ್ವದಲ್ಲಿ ತಂಡವೊಂದು ಅನಿಲ್ ಕುಮಾರ್ ಮೇಲೆ ಹಲ್ಲೆಗೈದಿರುವುದಾಗಿ ಕುಂಬಳೆ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ಘರ್ಷಣೆ ವೇಳೆ ಚಾಕು ಅನಿಲ್ ಕುಮಾರ್‌ರ ಕುತ್ತಿಗೆಯ ಹಿಂಭಾಗದಲ್ಲಿ ಚುಚ್ಚಿದ ಸ್ಥಿತಿಯಲ್ಲಿತ್ತು. ಕೂಡಲೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ತಲುಪಿಸಿ ಶಸ್ತ್ರ ಚಿಕಿತ್ಸೆ ಮೂಲಕ ಚಾಕುವನ್ನು ಹೊರ ತೆಗೆಯಲಾಯಿತು. ಘಟನೆಗೆ ಸಂಬಂಧಿಸಿ ಎರಡು ವಾಹನಗಳನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.