ತಳಿಪರಂಬ: ಕುರುಮಾತೂರ್ ಪೋಕುಂಡ್ ಡಯರಿ ಜುಮಾ ಮಸೀದಿ ಸಮೀಪದ 49 ದಿನ ಪ್ರಾಯದ ಮಗುವಿನ ಸಾವು ಕೊಲೆ ಕೃತ್ಯವೆಂದು ದೃಢೀಕರಣಗೊಂಡಿದೆ. ಈ ವಿಷಯದಲ್ಲಿ ಕಸ್ಟಡಿಗೆ ತೆಗೆದು ವಿಚಾರಣೆ ನಡೆಸಿ ನಿನ್ನೆ ಸಂಜೆ ತಾಯಿ ಮುಬಶಿರಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸೋಮವಾರ ಬೆಳಿಗ್ಗೆ 9.30ರ ವೇಳೆ ಜಾಬಿರ್‌ರ ಪುತ್ರ ಅಮೀಶ್ ಅಲನ್ ಜಾಬಿರ್‌ನನ್ನು ಬಾವಿಯಲ್ಲಿ ಪತ್ತೆ ಮಾಡಲಾಗಿತ್ತು. ಮಗುವನ್ನು ಸ್ನಾನ ಮಾಡಿಸುತ್ತಿರುವಾಗ ಆಕಸ್ಮಾತ್ ಬಾವಿಗೆ ಬಿದ್ದಿರುವುದಾಗಿ ತಾಯಿ ತಿಳಿಸಿದ್ದಳು. ಸ್ಥಳೀಯನಾದ ಪಿ.ಪಿ. ನಾಸರ್ ಎಂಬವರು 24 ಅಡಿ ಆಳದ ಬಾವಿಗೆ ಇಳಿದು ಮಗುವನ್ನು ಹೊರ ತೆಗೆದು ಆಸ್ಪತ್ರೆಗೆ ಕೊಂಡೊಯ್ಯಲಾ ಯಿತಾದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಕಬ್ಬಿಣದ ಗ್ರಿಲ್ ಹಾಗೂ ಆವರಣಗೋಡೆ ಇರುವ ಬಾವಿಯಾಗಿದೆ ಇದು. ಆಕಸ್ಮಾತ್ ಬಿದ್ದಿದೆ ಎಂಬ ತಾಯಿಯ ಹೇಳಿಕೆ ಆರಂಭದಲ್ಲೇ ಪೊಲೀಸರಿಗೆ ಶಂಕೆ ಉಂಟುಮಾಡಿತ್ತು. ಇದರ ಆಧಾರದಲ್ಲಿ ಮುಬಶಿರಳನ್ನು ಸೋಮವಾರ ಸಂಜೆ ಮಹಿಳಾ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ಕೃತ್ಯವೆಂದು ಸ್ಪಷ್ಟವಾದ ಸೂಚನೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ಪಿಕೆಇ ಪ್ರೇಮಚಂದ್ರನ್ ಹಾಗೂ ಇನ್ಸ್‌ಪೆಕ್ಟರ್ ಬಾಬುಮೋನ್ ಮುಬಶಿರಳನ್ನು ಮತ್ತೆ ಕಸ್ಟಡಿಗೆ ತೆಗೆದು ಪ್ರಶ್ನಿಸಿದ ಬಳಿಕ ಬಂಧಿಸಲಾಗಿದೆ.






