ಕಣ್ಣೂರು: ಕಣ್ಣೂರು ಎಡಿಎಂ ಆಗಿದ್ದ ನವೀನ್ಬಾಬು ಅವರ ಸಾವಿನ ಕುರಿತು ತನಿಖೆ ನಡೆಸಿದ ಮಾಜಿ ಎ.ಸಿ.ಪಿ. ಟಿ.ಕೆ. ರತ್ನಕುಮಾರ್ ಕಣ್ಣೂರಿನಲ್ಲಿ ಸಿಪಿಎಂ ಅಭ್ಯರ್ಥಿಯಾಗಿ ಸ್ಥಳೀಯಾಡಳಿತ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಶ್ರೀಕಂಠಪುರ ನಗರಸಭೆಯ ಕೋಟೂರು ವಾರ್ಡ್ನಿಂದ ಇವರನ್ನು ಕಣಕ್ಕಿಳಿಸಲು ಸಿಪಿಎಂ ನಿರ್ಧರಿಸಿದೆ. ಕಣ್ಣೂರು ರೇಂಜ್ ಐ.ಜಿ.ಯವರ ನೇತೃತ್ವದಲ್ಲಿ ಸಿಟಿ ಪೊಲೀಸ್ ಕಮಿಶನರ್ ಅಜಿತ್ ಕುಮಾರ್, ಅಸಿಸ್ಟೆಂಟ್ ಕಮಿಶನರಾಗಿದ್ದ ರತ್ನಕುಮಾರ್ ಎಂಬಿವರ ನೇತೃತ್ವದಲ್ಲಿ ನವೀನ್ಬಾಬು ಅವರ ಸಾವಿನ ಕುರಿತು ತನಿಖೆ ನಡೆಸಲಾಗಿತ್ತು.
ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾದ ಪಿ.ಪಿ. ದಿವ್ಯಾ ಈ ಪ್ರಕರಣದಲ್ಲಿ ಏಕ ಆರೋಪಿ. ತನಿಖೆ ಸರಿಯಾದ ರೀತಿಯಲ್ಲಿ ನಡೆದಿಲ್ಲವೆಂದೂ, ಅದ್ದರಿಂದ ತನಿಖೆ ಮುಂದುವರಿಸಬೇಕೆಂದು ಒತ್ತಾಯಿಸಿ ನವೀನ್ಬಾಬುರವರ ಕುಟುಂಬ ನ್ಯಾಯಾಲಯವನ್ನು ಸಮೀಪಿಸಿದೆ. ಪ್ರಕರಣದಲ್ಲಿ ಪಿ.ಪಿ. ದಿವ್ಯಾರಿಗೆ ಅನುಕೂಲಕರ ನಿಲುವುಗಳನ್ನು ಪೊಲೀಸರು ಕೈಗೊಂಡಿದ್ದಾರೆಂದು ಕುಟುಂಬ ಆರೋಪಿಸಿದೆ. ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸಿದ ಬೆನ್ನಲ್ಲೇ ರತ್ನಕುಮಾರ್ ಸೇವೆಯಿಂದ ನಿವೃತ್ತಿಗೊಂಡಿದ್ದರು. ಈ ಮಧ್ಯೆ ಸಿಪಿಎಂ ಟಿ.ಕೆ. ರತ್ನಕುಮಾರ್ರನ್ನು ಪಕ್ಷದ ಚಿಹ್ನೆಯಲ್ಲೇ ಸ್ಪರ್ಧೆ ಗಿಳಿಸಲು ತೀರ್ಮಾನಿಸಿದೆ. ತಾನು ಸಿಪಿಎಂನ ಬೆಂಬಲಿಗನಾಗಿ ದ್ದನೆಂದೂ, ಪಕ್ಷದ ನೇತಾರರು ತಾನು ಸ್ಪರ್ಧಿಸಬೇಕೆಂಬ ಆಗ್ರಹ ಮುಂದಿರಿಸಿದರೆ ಅದನ್ನು ಅಂಗಿಕರಿಸುವುದಾಗಿ ರತ್ನಕುಮಾರ್ ಈ ಹಿಂದೆ ತಿಳಿಸಿದ್ದರು. ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ಶೀಘ್ರ ಆರಂಭಿಸುವುದಾಗಿ ಅವರು ತಿಳಿಸಿದ್ದಾರೆ.
ರತ್ನಕುಮಾರ್ ಪೊಲೀಸ್ ಸೇವೆಗೆ ಪ್ರವೇಶಿಸುವ ಮೊದಲು ಶ್ರೀಕಂಠಪುರ ಸೊಸೈಟಿ ಕಾಲೇಜ್ನಲ್ಲಿ ಅಧ್ಯಾಪಕ ನಾಗಿಯೂ, ಕೋಟೂರು ಯುವಧಾರ ಕ್ಲಬ್ನ ವಾಲಿಬಾಲ್ ಕ್ರೀಡಾಪಟು ಕೂಡ ಆಗಿದ್ದರು. ಇದೇ ವೇಳೆ ರತ್ನಕುಮಾರ್ರನ್ನು ಅಭ್ಯರ್ಥಿ ಯಾಗಿಸಿರುವುದರ ವಿರುದ್ಧ ಕಾಂಗ್ರೆಸ್ ರಂಗಕ್ಕಿಳಿದಿದೆ. ರತ್ನಕುಮಾರ್ರನ್ನು ಅಭ್ಯರ್ಥಿಯಾಗಿಸಿರುವುದು ಉದ್ದೇಶಿತ ಕಾರ್ಯ ಸಾಧಿಸಿ ಕೊಟ್ಟ ಉಪಕಾರಕ್ಕೆ ಪ್ರತ್ಯುಪಕರವಾಗಿದೆಯೆಂದು ಡಿಸಿಸಿ ಅಧ್ಯಕ್ಷ ಮಾರ್ಟಿನ್ ಜೋರ್ಜ್ ಆರೋಪಿಸಿದ್ದಾರೆ.







