ನಾಮನಿರ್ದೇಶನ ಪತ್ರಿಕೆ ಮಲೆಯಾಳದಲ್ಲಿ : ಕನ್ನಡಿಗ ಅಭ್ಯರ್ಥಿಗಳಿಗೆ ಸಮಸ್ಯೆ

ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಯಲ್ಲಿ ಸ್ಪರ್ಧಿಸುವವರು ಸಲ್ಲಿಸುವ ನಾಮನಿರ್ದೇಶನ ಪತ್ರಿಕೆಯು ಕೇವಲ ಮಲೆಯಾಳ ಭಾಷೆಯಲ್ಲಿ ಮಾತ್ರವೇ ಮುದ್ರಣಗೊಂಡಿದೆ. ಇದರಿಂದ ಜಿಲ್ಲೆಯ ಕನ್ನಡ ಅಭ್ಯರ್ಥಿಗಳಿಗೆ ಸಮಸ್ಯೆ ಎದುರಾಗಿದೆ. ಮಲೆಯಾಳ ಓದಲು, ಬರೆಯಲು ತಿಳಿಯದ ಕನ್ನಡಿಗರಾದ ಅಭ್ಯರ್ಥಿಗಳು ನಾಮನಿರ್ದೇಶನ ಪತ್ರಿಕೆಯನ್ನು ಭರ್ತಿಗೊಳಿಸುವುದು ಹೇಗೆ ಎಂಬ ಆತಂಕ ಎದುರಾದ ಬಗ್ಗೆ ದೂರುಗಳು ಕೇಳಿ ಬರುತ್ತಿದೆ. ನಾಮನಿರ್ದೇಶನ ಪತ್ರಿಕೆಯಲ್ಲಿ ಹಲವು ಮಾಹಿತಿಗಳನ್ನು ದಾಖಲಿಸಬೇಕಾಗಿದೆ. ಆದರೆ ಮಲೆಯಾಳ ತಿಳಿಯದವರು ಫಾರ್ಮ್ ಭರ್ತಿಗೊಳಿಸುವ ವೇಳೆ ಎಲ್ಲಾದರೂ ಎಡವಟ್ಟಾದರೆ ಕೆಲವೊಮ್ಮೆ ನಾಮಪತ್ರ ತಿರಸ್ಕರಿಸಲ್ಪಡುವ ಸಾಧ್ಯತೆ ಇದೆ. ಅಲ್ಲದೆ ಭವಿಷ್ಯದಲ್ಲಿ ಹಲವು ಸಮಸ್ಯೆಗಳಿಗೂ ಕಾರಣವಾಗಲಿದೆ. ಆದ್ದರಿಂದ ಕನ್ನಡಿಗರಾದ ಅಭ್ಯರ್ಥಿಗಳಿಗೆ ಇಲ್ಲಿ ಕೂಡಾ ಇತರರ ಸಹಾಯ ಯಾಚಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ ಮುಖ್ಯವಾಗಿ ಕಾಸರಗೋಡು, ಮಂಜೇಶ್ವರ ತಾಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರಿದ್ದು, ಅವರಿಗಾಗಿ ಮಲೆಯಾಳದ ಜೊತೆಗೆ ಕನ್ನಡದಲ್ಲೂ ಫಾರ್ಮ್ ಮತ್ತಿತರ ದಾಖಲೆಗಳನ್ನು ನೀಡಬೇಕೆಂಬ ಸರಕಾರದ ಸುತ್ತೋಲೆಯಿದ್ದರೂ ಅದು ಪಾಲಿಸಲ್ಪಡುತ್ತಿಲ್ಲ ಎಂಬ ಆರೋಪ ಪದೇ ಪದೇ ಕೇಳಿ ಬರುತ್ತಿದೆ. ಈಗಾಗಲೇ ವಿತರಣೆಯಾಗುತ್ತಿರುವ ಎಸ್‌ಐಆರ್ ಫಾರ್ಮ್‌ಗಳು ಕೂಡಾ ಮಲೆಯಾಳದಲ್ಲಿ ಮಾತ್ರವೇ ಮುದ್ರಣಗೊಂಡಿದ್ದು, ಇದು ಕನ್ನಡಿಗರಿಂದ ಭಾರೀ ಪ್ರತಿಭಟನೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಚುನಾವಣೆಯ ನಾಮನಿರ್ದೇಶನ ಪತ್ರಿಕೆ ಕೂಡಾ ಮಲೆಯಾಳದಲ್ಲಿ ಮಾತ್ರವೇ ಮುದ್ರಿಸಲಾಗಿದೆ.

RELATED NEWS

You cannot copy contents of this page