ಪೆರಿಯ ಕಲ್ಯೋಟ್‌ನ ಪೊದೆಗಳೆಡೆಯಲ್ಲಿ ನಕಲಿ ಕೋವಿ ಅಡಗಿಸಿಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪೆರಿಯ, ಕಲ್ಯೋಟ್‌ನ ಪೊದೆಗಳೆಡೆಯಲ್ಲಿ ಅಡಗಿಸಿಟ್ಟ ಸ್ಥಿತಿಯಲ್ಲಿ ನಕಲಿ ಕೋವಿ ಪತ್ತೆಯಾಗಿದೆ. ಹೊಸದುರ್ಗ ಅಬಕಾರಿ ಅಧಿಕಾರಿ ಮದ್ಯ ಪತ್ತೆಹಚ್ಚುವುದಕ್ಕಾಗಿ ನಡೆಸಿದ ತಪಾಸಣೆ ಮಧ್ಯೆ ಕೋವಿ ಪತ್ತೆಯಾಗಿದೆ. ಮಾಹಿತಿ ತಿಳಿದು ತಲುಪಿದ ಬೇಕಲ ಎಸ್‌ಐ ಪಿ. ಅಖಿಲ್ ಹಾಗೂ ತಂಡ ಕೋವಿಯನ್ನು ಕಸ್ಟಡಿಗೆ ತೆಗೆದು ಕೇಸು ದಾಖಲಿಸಿದ್ದಾರೆ. ಪೆರಿಯ-ಉದಯಪುರಂ ರಸ್ತೆಯ ಕಲ್ಯೋಟ್‌ನಲ್ಲಿರುವ ಇರಿಗೇಶನ್ ಇಲಾಖೆಯ ರೈನ್ ಗೇಜ್ ಸ್ಟೇಶನ್‌ನ ಉತ್ತರ ಭಾಗದ ಪೊದೆಗಳ ಮಧ್ಯೆ ನಿನ್ನೆ ಸಂಜೆ ಕೋವಿಯನ್ನು ಪತ್ತೆಹಚ್ಚ ಲಾಗಿದೆ. ಎರಡು ಭಾಗಗಳಾಗಿ ಅಡಗಿಸಿಟ್ಟ ಸ್ಥಿತಿಯಲ್ಲಿ ಕೋವಿ ಪತ್ತೆಯಾಗಿದೆ. ಇದು ೮೨ ಸೆಂಟಿಮೀಟರ್ ಉದ್ದವಿದೆ. ಕೋವಿ ಅಡಗಿಸಿಟ್ಟ ಸ್ಥಿತಿಯಲ್ಲಿ ಮದ್ಯವನ್ನು ಅಡಗಿಸಿಟ್ಟಿರಬೇಕೆಂಬ ರಹಸ್ಯ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಅಬಕಾರಿ ತಂಡ ಶೋಧ ಕಾರ್ಯಕ್ಕಾಗಿ ತಲುಪಿತ್ತು. ಕೋವಿಯನ್ನು ಕಸ್ಟಡಿಗೆ ತೆಗೆದ ಬೇಕಲ ಪೊಲೀಸರು ಅದನ್ನೀಗ ಠಾಣೆಯಲ್ಲಿರಿಸಿದ್ದಾರೆ. ಭೇಟೆಗಾಗಿ ಅಥವಾ ಇನ್ಯಾವುದಾದರೂ ಅಗತ್ಯಕ್ಕಾಗಿ ಕೋವಿಯನ್ನು ಅಡಗಿಸಿಟ್ಟಿರಬಹುದೆಂದು ಶಂಕಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page