ಶಬರಿಮಲೆ ಚಿನ್ನ ಕಳವು: ಬಂಧಿತ ದೇವಸ್ವಂ ಮಂಡಳಿ ಮಾಜಿ ಅಧ್ಯಕ್ಷ ಪದ್ಮಕುಮಾರ್ ಜೈಲಿಗೆ; ತನಿಖೆ ಮಾಜಿ ಮುಜುರಾಯಿ ಸಚಿವರತ್ತ

ತಿರುವನಂತಪುರ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ ಬಂಧಿಸಿದ ತಿರುವಿದಾಂಕೂರು ದೇವಸ್ವಂ ಮಂಡಳಿ   ಮಾಜಿ ಅಧ್ಯಕ್ಷ, ಸಿಪಿಎಂ ನೇತಾರ ಹಾಗೂ ಮಾಜಿ ಶಾಸಕನೂ ಆಗಿರುವ  ಎ. ಪದ್ಮಕುಮಾರ್‌ರನ್ನು ಕೊಲ್ಲಂ ವಿಜಿಲೆನ್ಸ್  ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಬಳಿಕ ತಿರುವನಂತಪುರ ಸ್ಪೆಷಲ್ ಜೈಲಿನಲ್ಲಿ ೧೪ ದಿನಗಳ ತನಕ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ಇದೇ ಸಂದರ್ಭದಲ್ಲಿ ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ಪದ್ಮಕುಮಾರ್‌ನನ್ನು ತಮ್ಮ ಕಸ್ಟಡಿಗೆ ಬಿಟ್ಟುಕೊಡುವಂತೆ ತನಿಖಾ ತಂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅವರನ್ನು ಇಂದು ಪೊಲೀಸ್ ಕಸ್ಟಡಿಗೆ ಬಿಟ್ಟುಕೊಡುವ ಸಾಧ್ಯತೆ ಇದೆ. ಪದ್ಮಕುಮಾರ್‌ನ ಬಂಧನದ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತg ದವರ ಸಂಖ್ಯೆ ಈಗ ೬ಕ್ಕೇರಿದೆ. ಪದ್ಮಕುಮಾರ್ ಈ ಪ್ರಕರಣದಲ್ಲಿ ಬಂಧಿತರಾದ ದೇವಸ್ವಂ ಮಂಡಳಿಯ ಎರಡನೇ ಮಾಜಿ ಅಧ್ಯಕ್ಷನಾಗಿದ್ದಾನೆ.  ಇದೇ ಪ್ರಕರಣಕ್ಕೆ ಸಂಬಂಧಿಸಿ  ಇನ್ನೋರ್ವ ಮಾಜಿ ಅಧ್ಯಕ್ಷ ಎನ್. ವಾಸುನನ್ನು ಈ ಹಿಂದೆಯೇ ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

೨೦೧೯ರಲ್ಲಿ ಶಬರಿಮಲೆ ದೇಗುಲದ ಗರ್ಭಗುಡಿಯ ಬಾಗಿಲು ಮತ್ತು ದ್ವಾರಪಾಲಕ ವಿಗ್ರಹಗಳ ಚಿನ್ನ ಲೇಪಿತ ಕವಚಗಳನ್ನು ಮರುಲೇಪನಕ್ಕಾಗಿ ಈ ಪ್ರಕರಣದ ಒಂದನೇ ಆರೋಪಿ ಉಣ್ಣಿಕೃಷ್ಣನ್ ಪೋತ್ತಿಗೆ ಹಸ್ತಾಂತರಿಸುವಾಗ ಪದ್ಮಕುಮಾರ್ ದೇವಸ್ವಂ ಮಂಡಳಿಯ ಅಧ್ಯಕ್ಷರಾಗಿದ್ದರು. ಮರುಲೇಪನದ ಬಳಿಕ ಪೋತ್ತಿ ಕವಚಗಳನ್ನು ಹಿಂತಿರುಗಿಸುವಾಗ ಅದರಲ್ಲಿ ಸುಮಾರು ೪ ಕೆಜಿ ಚಿನ್ನ ಕಡಿಮೆಯಾಗಿತ್ತು. ಆ ಹಿನ್ನೆಲೆಯಲ್ಲಿ ಪದ್ಮಕುಮಾರ್‌ನನ್ನು ಬಂಧಿಸಿ ಎಂಟನೇ ಆರೋಪಿಯನ್ನಾಗಿ ಒಳಪಡಿಸಲಾಗಿದೆ. ಮಂಡಳಿ ಕೈಗೊಂಡ ತೀರ್ಮಾನದ ಪ್ರಕಾರ  ತಾವುದೇಗುಲದ ಚಿನ್ನದ ಕವಚಗಳನ್ನು ಪೋತ್ತಿಗೆ ಹಸ್ತಾಂತರಿಸಿದ್ದೇವೆ ಎಂದು   ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಬಂಧಿತರಾಗಿರುವ ಮಂಡಳಿಯ ಅಧಿಕಾರಿಗಳಾದ ಮುರಾರಿಬಾಬು, ಕೆ.ಎಸ್. ಬೈಜು ಮತ್ತು ಡಿ. ಸುಧೀಶ್ ಕುಮಾರ್ ತನಿಖಾ ತಂಡಕ್ಕೆ ಹೇಳಿಕೆ ನೀಡಿದ್ದರು. ಅದು ಪದ್ಮಕುಮಾರ್‌ನನ್ನು ಈ ಪ್ರಕರಣದಲ್ಲಿ ಸಿಲುಕಿಸುವಂತೆ ಮಾಡಿದೆ.

ಚಿನ್ನದ ಕವಚಗಳನ್ನು ಪೋತ್ತಿಗೆ ಹಸ್ತಾಂತರಿಸಲು ನಿರ್ದೇಶ ನೀಡಿದ್ದು ಪದ್ಮಕುಮಾರ್ ಆಗಿದ್ದಾನೆಂದು ನ್ಯಾಯಾಲಯಕ್ಕೆ ಸಲ್ಲಿಸಿದ ರಿಮಾಂಡ್ ವರದಿಯಲ್ಲಿತನಿಖಾ ತಂಡ ತಿಳಿಸಿದೆ. 

ಶಬರಿಮಲೆ ದೇಗುಲದ ಚಿನ್ನ ಕಳವು ನಡೆದ ವೇಳೆ ಸಿಪಿಎಂನ ಹಿರಿಯ ನೇತಾರ ಕಡಗಂಪ್ಪಳ್ಳಿ ಸುರೇಂದ್ರನ್ ರಾಜ್ಯ ಮುಜರಾಯಿ ಖಾತೆಯ ಸಚಿವರಾಗಿದ್ದರು. ನಿನ್ನೆ ಬಂಧಿತನಾದ ಪದ್ಮಕುಮಾರ್ ನೀಡಿರುವಹೇಳಿಕೆಯ ಆಧಾರದಲ್ಲಿ ಕಡಗಂಪಳ್ಳಿ  ಸುರೇಂದ್ರನ್‌ರ ಹೇಳಿಕೆಯನ್ನು ದಾಖಲಿಸಲು ತನಿಖಾ ತಂಡ ಮುಂದಾಗಿದೆ. ಇದರಿಂದಾಗಿ ಈ ವಿಷಯದಲ್ಲಿ ಮುಜರಾಯಿ ಇಲಾಖೆ ಹಾಗೂ ಸರಕಾರದ ಹಸ್ತಕ್ಷೇಪ ಉಂಟಾಗಿತ್ತೇ ಎಂಬುದನ್ನು ಸ್ಪಷ್ಟಪಡಿಸಲು ಕಡಗಂಪಳ್ಳಿ ಸುರೇಂದ್ರನ್‌ರ ಹೇಳಿಕೆ ಈಗ ಅನಿವಾರ್ಯವಾಗಿದೆ. ಇದರಿದಾಗಿ ಅವರಿಗೆ ತಮ್ಮ ಮುಂದಾ ಹಾಜರಾಗುವಂತೆ ನೋಟೀಸು ಜ್ಯಾರಿಗೊಳಿಸಲು ತನಿಖಾತಂಡ ತೀರ್ಮಾನಿಸಿದೆ.

ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ವೇಳೆಯಲ್ಲೇ ಶಬರಿಮಲೆ ದೇಗುಲದ ಚಿನ್ನ ಕಳವು ನಡೆದ ಪ್ರಕರಣಕ್ಕೆ ಸಂಬಂಧಿಸಿ ಸಿಪಿಎಂ ನೇತಾರ ಬಂಧಿತನಾಗಿರುವ ಹಿನ್ನೆಲೆಯಲ್ಲಿ  ಸಿಪಿಎಂನ್ನು ತೀವ್ರ ಬಿಕ್ಕಟ್ಟಿನಲ್ಲಿ ಸಿಲುಕುವಂತೆ ಮಾಡಿದೆ. ಇದು ಚುನಾವಣೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

You cannot copy contents of this page