ಕಾಸರಗೋಡು: ಉಳಿಯತ್ತಡ್ಕ ಬಳಿಯ ಇಜ್ಜತ್ನಗರದ ಮೊಹಮ್ಮದ್ ಮುಸ್ತಫ ಎಂಬವರ ಮನೆ ಅಂಗಳದಿಂದ ಈ ತಿಂಗಳ ೧ರಂದು ರಾತ್ರಿ ಕಳವುಗೈದ ಟೊಯೋಟೊ ಗ್ಲಾನ್ಸರ್ ಕಾರನ್ನು ಪಾಲಕ್ಕಾಡ್ನ ಮಣ್ಣಾರ್ಕಾಡ್ನಲ್ಲಿ ವಿದ್ಯಾನಗರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಕಳನಾಡ್ ಮೇಲ್ಪರಂಬ ಕೆಜಿಎನ್ ಕ್ವಾರ್ಟರ್ಸ್ ನಿವಾಸಿ ರಂಜಾನ್ ಸುಲ್ತಾನ್ ಬಶೀರ್ (25), ಮೂಲತಃ ತಳಂಗರೆ ತೆರುವತ್ ನಿವಾಸಿ ಹಾಗೂ ಈಗ ಮೇಲ್ಪರಂಬದ ಕ್ವಾರ್ಟರ್ಸ್ವೊಂದರಲ್ಲಿ ವಾಸಿಸುತ್ತಿರುವ ಹಮ್ನಾಸ್ ಟಿ.ಎಚ್. (24), ಮತ್ತು ಪಾಲಕ್ಕಾಡ್ ಮಣ್ಣಾರ್ಕಾಡ್ ಪುದುಕುಳ ತೆಕ್ಕೇಕಡ ನಿವಾಸಿ ಅಜರುದ್ದೀನ್ ಪಿ. (25) ಬಂಧಿತ ಆರೋಪಿಗಳು. ಈ ಪೈಕಿ 3ನೇ ಆರೋಪಿ ಅಜರುದ್ದೀನ್ನನ್ನು ಮಣ್ಣಾರ್ಕಾಡ್ ಪೊಲೀಸರ ಸಹಾಯದಿಂದ ವಿದ್ಯಾನಗರ ಪೊಲೀಸರು ಅತೀ ಸಾಹಸಿಕವಾಗಿ ಸೆರೆ ಹಿಡಿದು ಆತನ ವಶದಲ್ಲಿದ್ದ ಕಾರನ್ನು ವಶಪಡಿಸಿ ವಿದ್ಯಾನಗರಕ್ಕೆ ಸಾಗಿಸಿದ್ದಾರೆ. ಇತರ ಇಬ್ಬರು ಆರೋಪಿಗಳನ್ನು ಅವರ ವಾಸಸ್ಥಳದ ಪರಿಸರದಿಂದ ಪೊಲೀಸರು ಬಂಧಿಸಿದ್ದಾರೆ.
ವಿದ್ಯಾನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೆ.ಪಿ. ಶೈನ್, ಎಸ್ಐಗಳಾದ ಸಫ್ವಾನ್ ಕೆ.ಪಿ, ಸುರೇಶ್ ಕುಮಾರ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಹರೀಶ್, ಸಿವಿಲ್ ಪೊಲೀಸ್ ಆಫೀಸರ್ಗಳಾದ ಉಣ್ಣಿಕೃಷ್ಣನ್ ಮತ್ತು ಪ್ರಮೋದ್ ಎಂಬವರನ್ನೊಳಗೊಂಡ ಪೊಲೀಸರ ತಂಡ ಈ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. 1 ಮತ್ತು 2ನೇ ಆರೋಪಿಗಳು ಕಾರನ್ನು ಇಜ್ಜತ್ನಗರದ ಮೊಹಮ್ಮದ್ ಮುಸ್ತಫರ ಮನೆಯಿಂದ ಕಳವುಗೈದ ಬಳಿಕ ಅದನ್ನು ಮಣ್ಣಾರ್ಕಾಡ್ಗೆ ಸಾಗಿಸಿ 3ನೇ ಆರೋಪಿ ಅಜರು ದ್ದೀನ್ಗೆ ಹಸ್ತಾಂತರಿಸಿದ್ದರೆಂದೂ, ಹೀಗೆ ಕಳವುಗೈದ ಕಾರನ್ನು ಅಜರುದ್ದೀನ್ ಕೊಯಂಬತ್ತೂರಿಗೆ ಸಾಗಿಸಿ ಅದನ್ನು ಒಡೆದು ಕಾರಿನ ಬಿಡಿ ಭಾಗಗಳನ್ನು ಮಾರಾಟ ಮಾಡುವ ಯೋಜನೆ ಹಾಕಿಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಕಳವಿಗೀಡಾದ ಕಾರನ್ನು ಒಡೆದು ಬಿಡಿಭಾಗಗಳನ್ನು ಮಾರಾಟ ಮಾಡುವುದೇ ಅಜರುದ್ದೀನ್ನ ಪ್ರಧಾನ ದಂಧೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







