ಮೊಗ್ರಾಲ್: ಹಂದಿಯ ಬೆನ್ನಲ್ಲೇ ಮುಳ್ಳುಹಂದಿ ಕೂಡಾ ಕೃಷಿಯನ್ನು ನಾಶಪಡಿಸಲು ಆರಂಭಿಸಿರುವುದರೊಂ ದಿಗೆ ಕೃಷಿಕರು ಮತ್ತಷ್ಟು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಮೊಗ್ರಾಲ್ ವಲಿಯನಾಂಗಿ ರಸ್ತೆಯ ಕೆ. ಮುಹಮ್ಮದ್ ಕುಂಞಿಯ ವರ ಹಿತ್ತಿಲಲ್ಲಿ ಮೂರು ವರ್ಷದ ಹಿಂದೆ ನೆಟ್ಟಿದ್ದ 15 ತೆಂಗಿನ ಸಸಿಗಳನ್ನು ರಾತ್ರಿ ವೇಳೆ ಮುಳ್ಳುಹಂದಿ ನಾಶಪಡಿಸಿದೆ. ತೆಂಗಿನ ಗಿಡಗಳ ಬುಡವನ್ನು ಅಗೆದು ಸಸಿಗಳನ್ನು ಮಗುಚಿ ಹಾಕಿ ನಾಶಪಡಿಸಿದೆ. ಕಳೆದ ವರ್ಷ ಮೊಗ್ರಾಲ್‌ನ ವಿವಿಧ ಭಾಗಗಳಲ್ಲಿ ಹಂದಿಗಳ ಕಾಟ ವಿಪರೀತ ವಾಗಿತ್ತು. ಮನೆ ಹಿತ್ತಿಲಲ್ಲಿ ನೆಟ್ಟಿದ್ದ ಬಾಳೆಗಳನ್ನು ಅಂದು ವ್ಯಾಪಕವಾಗಿ ನಾಶಪಡಿಸಿತ್ತು. ದೂರು ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ ವೆಂದು ಆರೋಪಿಸಲಾಗಿದೆ.
ಕೃಷಿ ಸ್ಥಳಗಳಿಗೆ ಕಾಡುಪ್ರಾಣಿಗಳ ಆಕ್ರಮಣವನ್ನು ತಡೆಯಲು ಹಲವಾರು ಯೋಜನೆಗಳನ್ನು ಸರಕಾರ ಘೋಷಿಸುತ್ತಿದೆಯಾದರೂ ಯಾವುದೂ ಕೂಡಾ ಕೃಷಿಕರ ಸಂರಕ್ಷಣೆಗೆ ಉಪಯುಕ್ತವಾಗುತ್ತಿಲ್ಲವೆಂಬ ಆರೋಪವೂ ಕೇಳಿ ಬಂದಿದೆ. ಕೃಷಿನಾಶ ತಡೆಯಲು ಕ್ರಮ ಕೈಗೊಳ್ಳಬೇಕೆಂದು, ನಾಶಗೊಂಡ ಕೃಷಿಗೆ ಸೂಕ್ತ ನಷ್ಟ ಪರಿಹಾರ ಲಭ್ಯಗೊಳಿಸಬೇಕೆಂದು ಆಗ್ರಹಿಸಿ ಕೆ. ಮುಹಮ್ಮದ್ ಕುಂಞಿ ಕುಂಬಳೆ ಕೃಷಿಭವನ, ವಿಲ್ಲೇಜ್ ಕಚೇರಿಯಲ್ಲಿ ದೂರು ನೀಡಿದ್ದಾರೆ.







