ಕಾಸರಗೋಡು: ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಈತಿಂಗಳ ೯ ಮತ್ತು ನಿನ್ನೆ ಎಂಬೀ ಎgಡು ಹಂತಗಳಲ್ಲಾಗಿ ನಡೆದ ಚುನಾವಣೆಯ ಮತ ಎಣಿಕೆ ನಾಳೆ ಬೆಳಿಗ್ಗೆ ೮ ಗಂಟೆಗೆ ಆರಂಭಗೊಳ್ಳಲಿದೆ. ಮತ ಎಣಿಕೆ ಮುನ್ನಡೆಗಳ ಸೂಚನೆಗಳು ಪ್ರತೀ ಅರ್ಧ ತಾಸಿಗಳಿಗೊಮ್ಮೆಹೊರಬರಲಿದೆ. ಇದರಂತೆ ಕಾಸರಗೋಡು ಜಿಲ್ಲೆಯ ೮ ಸೇರಿದಂತೆ ರಾಜ್ಯದಲ್ಲಿ ಒಟ್ಟಾರೆಯಾಗಿ ೨೪೪ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಇದರಂತೆ ಕಾಸರಗೋಡು ಜಿಲ್ಲೆಯ ವರ್ಕಾಡಿ, ಪೈವಳಿಕೆ, ಮೀಂಜ, ಪುತ್ತಿಗೆ, ಮಂಗಲ್ಪಾಡಿ, ಎಣ್ಮಕಜೆ, ಮಂಜೇಶ್ವರ ಗ್ರಾಮ ಪಂಚಾಯತ್ ಮತ್ತು ಮಂಜೇಶ್ವರ ಬ್ಲೋಕ್ ಪಂಚಾಯತ್‌ನ ಮತ ಎಣಿಕೆಗಳು ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ. ಕಾರಡ್ಕ ಬ್ಲೋಕ್ ಪಂಚಾಯತ್, ಕುಂಬ್ಡಾಜೆ, ಬೆಳ್ಳೂರು, ದೇಲಂಪಾಡಿ, ಕಾರಡ್ಕ, ಮುಳಿಯಾರು, ಕುತ್ತಿಕ್ಕೋಲು ಮತ್ತು ಬೇಡಡ್ಕ ಗ್ರಾಮ ಪಂಚಾಯತ್‌ಗಳ ಮತ ಎಣಿಕೆ ಬೋವಿಕ್ಕಾನ ಬಿಎಆರ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ. ಕಾಸರಗೋಡು ಬ್ಲಾಕ್ ಪಂಚಾಯತ್, ಕುಂಬಳೆ, ಮೊಗ್ರಾಲ್ ಪುತ್ತೂರು, ಮಧೂರು, ಚೆಂಗಳ, ಚೆಮ್ನಾಡು, ಬದಿಯಡ್ಕ ಗ್ರಾಮ ಪಂಚಾಯತ್‌ಗಳ ಹಾಗೂ ಕಾಸರಗೋಡು ನಗರಸಭೆಯ ಮತ ಎಣಿಕೆ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ನಡೆಯಲಿದೆ. ಉಳಿದಂತೆ ಇತರ ಪಂಚಾಯತ್‌ಗಳ ಮತ ಎಣಿಕೆಗಳು ಪಡನ್ನಕ್ಕಾಡು ನೆಹರೂ ಆರ್ಟ್ಸ್ ಆಂಡ್ ಸಯನ್ಸ್ ಕಾಲೇಜು, ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆ, ಹೊಸದುರ್ಗ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಪರಪ್ಪ ಹೈಯರ್ ಸೆಕೆಂಡರಿ ಶಾಲೆ ಮತ್ತು ನೀಲೇಶ್ವರ ರಾಜಾಸ್ ಹೈಯರ್ ಸೆಕೆಂಡರಿ ಶಾಲೆ ಎಂಬಿಡೆಗಳಲ್ಲಾಗಿ ನಡೆಯಲಿದೆ.
ಜಿಲ್ಲಾ ಪಂಚಾಯತ್‌ಗಳ ಅಂಚೆ ಮತಗಳ ಎಣಿಕೆ ಆಯಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಲಿದೆ. ಮತದಾನ ನಿರ್ವಹಿಸಿದ ಮತಯಂತ್ರಗಳನ್ನು ಬಿಗಿ ಪೊಲೀಸ್ ಭದ್ರತೆಯೊಂದಿಗೆ ಸ್ಟ್ರಾಂಗ್ ರೂಂನಲ್ಲಿರಿಸಲಾಗಿದೆ. ಇದರಂತೆ ಕಾಸರಗೋಡಿನ ಮತ ಯಂತ್ರಗಳನ್ನು ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಇರಿಸಲಾಗಿದೆ.
ನಾಳೆ ಮತ ಎಣಿಕೆ ನಡೆಯಲಿರುವಂತೆಯೇ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಒಕ್ಕೂಟಗಳು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿವೆ.







