ತಿರುವನಂತಪುರ: ಅಲ್ಪ ಕಾಲದಿಂದ ಹೃದಯಾಘಾತ ಉಂಟಾಗಿ ಯುಕ-ಯುವತಿಯರು ಕುಸಿದುಬಿದ್ದು ಸಾವಿಗೀಡಾಗುವ ಘಟನೆಗಳಿಗೆ ಕೋವಿಡ್ ವ್ಯಾಕ್ಸಿನೇಶನ್ನೊಂದಿಗೆ ಯಾವುದೇ ಸಂಬಂಧವಿಲ್ಲವೆಂದು ಐಸಿಎಂಆರ್ನ ಅಧ್ಯಯನ ವರದಿಯನ್ನು ರಾಜ್ಯ ಆರೋಗ್ಯ ಇಲಾಖೆ ಕೂಡಾ ಸರಿಯೆಂದು ಅಭಿಪ್ರಾಯಪಟ್ಟಿದೆ. ನೇಶನಲ್ ಇನ್ಸ್ಟಿಟ್ಯೂಟ್ ಆಫ್ ಎಪಿಡಮೋಲಜಿ ಮೂಲಕ ಐಸಿಎಂಆರ್(ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ನಡೆಸಿದ ಅಧ್ಯಯನ ಅಧಿಕೃತವಾಗಿದೆಯೆಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿತ್ತು. ಇದರ ಬೆನ್ನಲ್ಲೇ ಈಗ ರಾಜ್ಯ ಆರೋಗ್ಯ ಇಲಾಖೆ ಕೂಡಾ ಅದನ್ನು ಒಪ್ಪಕೊಂಡಿದೆ. ಆದರೆ ಈ ಮೊದಲು ಆರೋಗ್ಯ ಸಮಸ್ಯೆಗಳಿಲ್ಲದ ಯುವಕರು ಹಾಗೂ ಮಕ್ಕಳಲ್ಲಿ ಕೋವಿಡ್ನ ಬಳಿಕ ಹೃದಯಾಘಾತ ಹಾಗೂ ಮತ್ತಿತರ ಹೃದಯ ಸಂಬಂಧ ಅಸೌಖ್ಯಗಳು, ರಕ್ತದೊ ತ್ತಡ, ಪಕ್ಷಾಘಾತ ಮೊದಲಾದ ಅಸೌಖ್ಯ ಹೆಚ್ಚಿರುವುದಾಗಿ ದೆಹಲಿ ಏಮ್ಸ್ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸುತ್ತಿದ್ದಾರೆ. ವ್ಯಾಕ್ಸಿನ್ ಬರುವುದರ ಮೊದಲು ಕೋವಿಡ್ ಬಾಧಿಸಿ ಆಸ್ಪತ್ರೆಯಲ್ಲಿ ದಾಖಲಾ ದವರ ಪೈಕಿ ದಿಢೀರ್ ಸಾವು ಸಾಧ್ಯತೆ ನಾಲ್ಕರಷ್ಟು ಹೆಚ್ಚಿತ್ತು. ವ್ಯಾಕ್ಸಿನ್ನ ಎರಡು ಡೋಸ್ ತೆಗೆದುಕೊಂಡಿರುವುದು ಮರಣ ಸಾಧ್ಯತೆಯನ್ನು ಕಡಿಮೆ ಮಾಡಿರುವುದಾಗಿ ಐಸಿಎಂಆರ್ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ. ಮದ್ಯಪಾನ, ಆಯಾಸಕರವಾದ ವ್ಯಾಯಾಮ, ಜೀವನಶೈಲಿ, ಕೋವಿಡ್ನ ಬಳಿಕದ ಸಂಕೀರ್ಣ ಸ್ಥಿತಿ ಮೊದಲಾದವುಗಳು ಯುವಕರ ಬಹುಬೇಗನೆ ಮರಣಕ್ಕೆ ಕಾರಣವಾಗುತ್ತಿದೆಯೆಂದು ಅಂದಾಜಿಸಲಾಗುತ್ತಿದೆ. ಅದೇ ರೀತಿ ಅನಿಯಂತ್ರಿತ ಧೂಮಪಾನ, ಒಂದಕ್ಕಿಂತ ಹೆಚ್ಚು ರೋಗಗಳು ಬಾಧಿಸಿರುವುದು ಸಾವಿಗೆ ಕಾರಣವಾಗುತ್ತಿದೆಯೆಂದು ಅಧ್ಯಯನದಲ್ಲಿ ಪತ್ತೆಹಚ್ಚಲಾಗಿತ್ತು.







