ಸಾಲದ ಕೂಪದಿಂದ ಪಾರಾಗಲು 1500 ರೂ.ಗಳ ಕೂಪನ್‌ಗೆ ಬಹುಮಾನವಾಗಿ ಮನೆ, ಸ್ಥಳ ಘೋಷಣೆ: ವ್ಯಕ್ತಿ ಸೆರೆ

ಕಣ್ಣೂರು: ಸಾಲದ ಹೊರೆಯನ್ನು ತಪ್ಪಿಸಲು ಬಹುಮಾನ ಕೂಪನ್‌ಗಳನ್ನು ಮುದ್ರಿಸಿ ಮಾರಾಟ ನಡೆಸಿದ ಮಾಜಿ ಅನಿವಾಸಿ ಸೆರೆಯಾಗಿದ್ದಾರೆ. ಅಡೈಕಾತೋಡ್ ಕಾಟುಪಾಲ ಸಮೀಪದ ನಿವಾಸಿ ಬೆನ್ನಿ ಥೋಮಸ್ (67)ರನ್ನು ಲಾಟರಿ ಇಲಾಖೆಯ ದೂರಿನಂತೆ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯ ಇವರಿಗೆ ರಿಮಾಂಡ್ ವಿಧಿಸಿದೆ. ೧೫೦೦ ರೂ. ಕೂಪನ್ ತೆಗೆದರೆ ಬಹುಮಾನವಾಗಿ ಮನೆ, ಸ್ಥಳ, ಕಾರು, ಬೈಕ್‌ಗಳೆಲ್ಲವನ್ನೂ ಭರವಸೆ ನೀಡಿ ಇವರು ಕೂಪನ್ ವಿತರಿಸಿದ್ದರು. ಮನೆಯ ಜಪ್ತಿಯನ್ನು ಹೊರತುಪಡಿಸಲು ಹಾಗೂ ಪತ್ನಿಯ ಕ್ಯಾನ್ಸರ್ ಚಿಕಿತ್ಸೆಗೆ ಹಣ ಕಂಡುಕೊಳ್ಳಲು 3300 ಚದರ ಅಡಿ ವಿಸ್ತೀರ್ಣದ ತನ್ನ ಮನೆಯನ್ನು ಪ್ರಥಮ ಬಹುಮಾನವಾಗಿ ಘೋಷಿಸಿ ಬಹುಮಾನ ಕೂಪನ್ ಮುದ್ರಿಸಿ ಮಾರಾಟ ಮಾಡಿರುವುದಾಗಿ ಬೆನ್ನಿ ತಿಳಿಸಿದ್ದಾರೆ. ಪ್ರೋತ್ಸಾಹಕ ಬಹುಮಾನಗಳನ್ನು ಕೂಡಾ ಘೋಷಿಸಿ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡಿ ಮಾರಾಟ ಮಾಡಿದ್ದರು. ಕೂಪನ್ ಮಾರಾಟ ಮಾಡಿ ಡ್ರಾ ದಿನಾಂಕ ಘೋಷಿಸಿದಾಗ ಲಾಟರಿ ಇಲಾಖೆಯ ದೂರು ಲಭಿಸಿದೆ. ಅದರ ಬೆನ್ನಲ್ಲೇ ಕೇಸು ದಾಖಲಿಸಿ ಇವರನ್ನು ಬಂಧಿಸಲಾಗಿದೆ.

ಕೇಳಗಂ ಪೊಲೀಸ್ ಬೆನ್ನಿಯವರ ಮನೆಯಿಂದ ಕೂಪನ್‌ಗಳನ್ನು ಹಾಗೂ ಕೌಂಟರ್ ಫೈಲ್‌ಗಳನ್ನು ವಶಪಡಿಸಿದೆ. ಬೆನ್ನಿ ಥೋಮಸ್ ಸೌದಿಯಲ್ಲಿ ಕೆಲಸ ಮಾಡುತ್ತಿದ್ದರು. 2006ರಲ್ಲಿ ಇವರು ಸ್ಪೋನ್ಸರ್‌ಗಳ ಸಹಾಯದೊಂದಿಗೆ ಸ್ಪೇರ್ ಪಾರ್ಟ್ಸ್ ಅಂಗಡಿ ಆರಂಭಿಸಿದ್ದರು. ಸ್ಪೋನ್ಸರ್ ಓರ್ವರ ಪುತ್ರ ಇನ್ನೊಂದು ಪ್ರಕರಣದಲ್ಲಿ ಪೊಲೀಸರ ಸೆರೆಯಾಗುವುದರೊಂದಿಗೆ ಅಂಗಡಿಯನ್ನು ಮುಚ್ಚಬೇಕಾಗಿ ಬಂತು. ಮನೆಯನ್ನು ಅಡವಿರಿಸಿ ೫೫ ಲಕ್ಷ ರೂ. ಸಾಲವಾಗಿ ತೆಗೆದು ಅಂಗಡಿ ಆರಂಭಿಸಿದ್ದರು. ಅಂಗಡಿ ಮುಚ್ಚಿದ ಹಿನ್ನೆಲೆಯಲ್ಲಿ ಬೆನ್ನಿ ಆರ್ಥಿಕವಾಗಿ ಸಂದಿಗ್ಧತೆಗೆ ಒಳಗಾದರು. ಈ ಮಧ್ಯೆ ಪತ್ನಿಗೆ ಕ್ಯಾನ್ಸರ್ ರೋಗ ಖಚಿತಪಡಿಸಲಾಯಿತು. ಬಳಿಕ ಸಾಲದ ಕೂಪದಲ್ಲಿ ಮುಳುಗುವ ಸ್ಥಿತಿ ಉಂಟಾಗಿದ್ದು, ಇದರಿಂದ ಪಾರಾಗಲು ಮನೆ ಮಾರಾಟಕ್ಕೆ ಯತ್ನಿಸಿದರು. ಆದರೆ ಖರೀದಿಗೆ ಯಾರೂ ಸಿದ್ಧರಾಗದ ಹಿನ್ನೆಲೆಯಲ್ಲಿ ಕೂಪನ್ ಮಾರಾಟ ಮಾಡಲು ತೀರ್ಮಾನಿಸಿದ್ದಾರೆ. ಕೂಪನ್ ವಿತರಣೆ ಆರಂಭಗೊಂಡಾಗಲೇ ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಡ್ರಾ ನಡೆಸುವುದಕ್ಕೆ ಯಾವುದೇ ತೊಂದರೆ ಇಲ್ಲವೆಂದು ತಿಳಿಸಿರುವುದಾಗಿ ಬೆನ್ನಿ ಥೋಮಸ್ ನುಡಿಯುತ್ತಾರೆ. ಆದರೆ ಲಾಟರಿ ಇಲಾಖೆಯ ಮಧ್ಯಪ್ರವೇಶದೊಂದಿಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

RELATED NEWS

You cannot copy contents of this page