ತಿರುವನಂತಪುರ: ಕೇರಳದ ಎಲ್ಲಾ ಸರಕಾರಿ ಸೇವೆಗಳಿಗಾಗಿ ಬರಲಿದೆ ಖಾಯಂ ಗುರುತುಚೀಟಿ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ವಿಷಯ ತಿಳಿಸಿದ್ದಾರೆ. ಕೇರಳದಲ್ಲಿ ಜನಿಸಿದವರೆಂಬುವುದನ್ನು ಸಾಬೀತುಪಡಿಸಲು ಒಂದು ಅಧಿಕೃತ ಗುರುತು ಚೀಟಿಯಾಗಿ ಫೋಟೋ ಲಗತ್ತಿಸಿದ ಇಂತಹ ನೇಟಿವಿಟಿ ಕಾರ್ಡ್ ವಿತರಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಆದರೆ ಇದು ಒಂದು ಕಾನೂನಾತ್ಮಕ ದಾಖಲುಪತ್ರವಲ್ಲವೆಂದೂ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ಈ ಕಾರ್ಡನ್ನು ಸರಕಾರದ ಎಲ್ಲಾ ಸೇವೆಗಳಿಗಾಗಿ ಉಪಯೋಗಿಸಬಹುದಾಗಿದೆ. ನೇಟಿವಿಟಿ ಸರ್ಟಿಫಿಕೇಟಿನ ಪರ್ಯಾಯವಾಗಿ ಇದನ್ನು ಉಪಯೋಗಿಸಬಹುದಾಗಿದೆ. ಆದರೆ ಈ ಕಾರ್ಡ್ ಭಾರತೀಯ ಪೌರತ್ವದೊಂದಿಗೆ ಯಾವುದೇ ರೀತಿಯ ನಂಟು ಹೊಂದಿಲ್ಲ. ಪೌರತ್ವ ತಿದ್ದುಪಡಿ ಕಾನೂನಿನ ಆತಂಕಗಳನ್ನು ಇದರಿಂದ ನಿವಾರಿಸಬಹುದಾಗಿದೆ. ಕೇರಳದಿಂದ ಯಾರನ್ನೂ ಹೊರಹಾಕದಿರುವ ಸ್ಥಿತಿ ಉಂಟಾಗುವುದನ್ನು ಇಲ್ಲದಾಗಿಸುವುದೇ ಈ ಕಾರ್ಡಿನ ಪ್ರಧಾನ ಉದ್ದೇಶವಾಗಿದೆ. ಆಧಾರ್ ಕಾರ್ಡ್ ಹೊಂದಿದ್ದರೂ, ಆ ವಿಷಯದಲ್ಲಿ ಭೀತಿಯ ಸ್ಥಿತಿ ನೆಲೆಗೊಂಡಿರುವುದರಿಂದಾಗಿ ನಾವು ಭಾರತೀಯರು ಹಾಗೂ ಕೇರಳೀಯರು ಎಂಬುದನ್ನು ದೃಢೀಕರಿಸುವ ಒಂದು ದಾಖಲುಪತ್ರವಾಗಿದೆ ಇದು. ಈ ಕಾರ್ಡ್ ವಿತರಿಸಲು ಕೇಂದ್ರ ಸರಕಾರದ ಅನುಮತಿಯ ಅಗತ್ಯವಿಲ್ಲವೆಂದು ಮುಖ್ಯಮಂತ್ರಿ ಹೇಳಿದ್ದಾರೆ.
ಈ ಕಾರ್ಡನ್ನು ವಿತರಿಸುವ ಹೊಣೆಗಾರಿಕೆ ತಹಶೀಲ್ದಾರರಿಗೆ ವಹಿಸಿಕೊಡಲಾಗಿದೆ. ಈ ಕಾರ್ಡ್ಗೆ ಕಾನೂನಾತ್ಮಕಗೊಳಿಸುವ ಕರಡು ಕಾನೂನಿಗೆ ರೂಪು ನೀಡುವ ಬಗ್ಗೆ ಕಾನೂನು ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ ಆ ವರದಿಯನ್ನು ಸಚಿವಸಂಪುಟದ ಮುಂದಿನ ಸಭೆಯಲ್ಲಿ ಮಂಡಿಸುವ ಹೊಣೆಗಾರಿಕೆಯನ್ನು ಕಂದಾಯ ಇಲಾಖೆಗೆ ವಹಿಸಿಕೊಡಲಾಗಿದೆ ಎಂದೂ ಮುಖ್ಯಮಂತ್ರಿ ತಿಳಿಸಿದ್ದಾರೆ.







