ಸೀತಾಂಗೋಳಿ: ಪೆಟ್ರೋಲ್ ಬಂಕ್ ಬಳಿ ಬೆಂಕಿ ಅನಾಹುತ ಉಂಟಾಗಿ ಅಗ್ನಿ ಶಾಮಕದಳದ ಸಮಯೋಚಿತ ಕಾರ್ಯಾಚರಣೆಯಿಂದಾಗಿ ಸಂಭಾವ್ಯ ಭಾರೀ ದೊಡ್ಡ ಅನಾಹುತ ತಪ್ಪಿಹೋದ ಘಟನೆ ನಡೆದಿದೆ.
ದರ್ಭೆತ್ತಡ್ಕ ಹಿಂದೂಸ್ತಾನ್ ಪೆಟ್ರೋಲ್ ಬಂಕ್ ಸಮೀಪ ನಿನ್ನೆ ಮಧ್ಯಾಹ್ನ ಈ ಬೆಂಕಿ ಅನಾಹುತ ಸಂಭವಿಸಿದೆ. ಕುಂಬಳೆ-ಬದಿಯಡ್ಕ ರಸ್ತೆಯ ಸೀತಾಂಗೋಳಿಯ ಮಾಲಿಕ್ ದೀನಾರ್ ಕಾಲೇಜು ಪರಿಸರದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತು. ನಂತರ ಅದು ಇನ್ನಷ್ಟು ಪ್ರದೇಶಗಳಿಗೆ ಪಸರಿಸಿ ಅಲ್ಲೇ ಪಕ್ಕದಲ್ಲಿರುವ ಪೆಟ್ರೋಲ್ ಬಂಕ್‌ನತ್ತ ಸಾಗುತ್ತಿರುವುದನ್ನು ಗಮನಿಸಿ ಪೆಟ್ರೋಲ್ ಬಂಕ್ ನವರು ನೀಡಿದ ಮಾಹಿತಿಯಂತೆ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎನ್. ವೇಣುಗೋಪಾಲ್ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ತುರ್ತಾಗಿ ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಸತತ ಎರಡು ತಾಸುಗಳ ತನಕ ನಡೆಸಿದ ಕಾರ್ಯಾಚರಣೆಯಲ್ಲಿ ಕೊನೆಗೂ ಬೆಂಕಿ ನಂದಿಸಿ ಅದು ಪೆಟ್ರೋಲ್ ಬಂಕ್‌ಗೆ ಹರಡುವುದನ್ನು ತಪ್ಪಿಸುವ ಮೂಲಕ ಸಂಭಾವ್ಯ ಭಾರೀ ದೊಡ್ಡ ಅನಾಹುತ ತಪ್ಪಿಸಿದರು.
ಬೆಂಕಿ ಈ ಪ್ರದೇಶದ ಸುಮಾರು ೨೦ ಎಕ್ರೆ ಪ್ರದೇಶಕ್ಕೆ ವ್ಯಾಪಿಸಿತ್ತು. ಇದರಿಂದಾಗಿ ಅಲ್ಲಿದ್ದ ಎಲ್ಲಾ ಮರಗಳೂ ಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಬೆಂಕಿ ನಂದಿಸಿದ ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಕಾಸರಗೋಡು ಅಗ್ನಿಶಾಮಕದಳದ ಇತರ ಸಿಬ್ಬಂದಿಗಳಾದ ಇ ಪ್ರಸೀದ್, ಒ.ಕೆ. ಪ್ರಜಿತ್, ಎಸ್. ಅಭಿಲಾಶ್, ಕೆ.ಜಿ. ಅಭಯ್‌ಸೇನ್, ಬಿ. ಅಮಲ್‌ರಾಜ್, ಜಿತು ಥೋಮಸ್, ಪಿ. ರಾಜೇಶ್, ಅರುಣಾ ಪಿ. ನಾಯರ್ ಕೆ.ಶ್ರೀಜೇಶ್, ಎ. ರಾಜೇಂದ್ರನ್, ಎನ್.ಪಿ. ರಾಖೇಶ್, ಪಿ. ರಾಜು ಮತ್ತು ಎಂ.ಕೆ. ಶೈಲೇಶ್ ಎಂಬವರು ಒಳಗೊಂಡಿದ್ದರು.
ಇದರ ಹೊರತಾಗಿ ಚಟ್ಟಂಚಾಲು ಕುನ್ನಾರಂನ ಒಂದು ಎಕರೆ ಖಾಸಗಿ ಹಿತ್ತಿಲು, ನೆಲ್ಲಿಕಟ್ಟೆಯ ೫ ಎಕ್ರೆ ಖಾಸಗಿ ಹಿತ್ತಿಲುಗಳಲ್ಲ್ಲಿ ಬೆಂಕಿ ಅನಾಹುತ ಉಂಟಾಗಿ ಅದನ್ನು ಕಾಸರಗೋಡು ಅಗ್ನಿಶಾಮಕದಳ ನಂದಿಸಿದೆ.







