ಉಪ್ಪಳ: ಮಂಜೇಶ್ವರ ಕಡಂಬಾರುಬೆಜ್ಜ ಶ್ರೀ ಚೌಕಾರು ಮಂತ್ರವಾದಿ ಗುಳಿಗ ದೈವಸ್ಥಾನ ಸಮೀಪ ಹಿತ್ತಿಲಿನಲ್ಲಿ ಹಣವಿರಿಸಿ ಕೋಳಿ ಅಂಕ ನಡೆಸುತ್ತಿದ್ದ ಮೂರು ಮಂದಿಯನ್ನು ಮಂಜೇಶ್ವರ ಪೊಲೀ ರು ಬಂಧಿಸಿದ್ದಾರೆ. ಬಂಧಿತರ ಕೈಯಿಂದ 72,860 ರೂಪಾಯಿ ಹಾಗೂ ಒಂದು ಕೋಳಿಯನ್ನು ವಶಪಡಿಸಲಾಗಿದೆ. ಅಂಗಡಿಮೊಗರಿನ ಚಂದ್ರಹಾಸ ರೈ (46), ಕಡಂಬಾರ್ನ ಬಾಲಕೃಷ್ಣ ಶೆಟ್ಟಿ (43), ಮಜೀರ್ಪಳ್ಳ ಸುಂಕದಕಟ್ಟೆಯ ರೋಹಿತ್ ರೈ (30) ಎಂಬಿವರನ್ನು ಮಂಜೇಶ್ವರ ಠಾಣೆ ಇನ್ ಸ್ಪೆಕ್ಟರ್ ಪಿ. ಅಜಿತ್ ಕುಮಾರ್ರ ನಿರ್ದೇಶ ಪ್ರಕಾರ ಎಸ್ಐ ಕೆ.ಆರ್. ಉಮೇಶ್ ನೇತೃತ್ವದ ತಂಡ ಬಂಧಿಸಿದೆ. ನಿನ್ನೆ ಸಂಜೆ ೪ ಗಂಟೆ ವೇಳೆ ದೈವಸ್ಥಾನ ಸಮೀಪದ ಹಿತ್ತಿಲಿನಲ್ಲಿ ಕೋಳಿ ಅಂಕ ನಡೆಯುತ್ತಿರುವುದಾಗಿ ಮಾಹಿತಿ ಲಭಿಸಿದ ಆಧಾರದಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿದ್ದರು. ಈ ವೇಳೆ ಇನ್ನು ಕೆಲವರು ಅಲ್ಲಿಂದ ಓಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಿಗೆ ನೋಟೀಸು ನೀಡಿ ಬಿಡುಗಡೆಗೊಳಿ ಸಲಾಗಿದೆ. ಪೊಲೀಸ್ ತಂಡದಲ್ಲಿ ಎಸ್ಐ ವೈಷ್ಣವ್ ರಾಮಚಂದ್ರನ್, ಸಿವಿಲ್ ಪೊಲೀಸ್ ಆಫೀಸರ್ಗಳಾದ ನಿತಿನ್, ಸನೂಪ್ ಎಂಬಿವರಿದ್ದರು. ಕೋಳಿ ಅಂಕ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.







