ಶಬರಿಮಲೆ ಚಿನ್ನಕಳವು ಪ್ರಕರಣ ತನಿಖೆ ಪೂರ್ತಿಗೊಳಿಸಲು 17ರಂದು ಅಂತಿಮ ಗಡು

ತಿರುವನಂತಪುರ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ತನಿಖೆಯನ್ನು ಈ ತಿಂಗಳ 17ರೊಳ ಗಾಗಿ ಪೂರ್ತಿಗೊಳಿಸುವಂತೆ ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ)ಗೆ ಕೇರಳ ಹೈಕೋರ್ಟ್ ನಿರ್ದೇಶ ನೀಡಿದೆ. ಇದರಂತೆ ಈ ಪ್ರಕರಣದ ಬಗ್ಗೆ ಈ ತನಕ ನಡೆಸಲಾದ ಎಲ್ಲಾ ತನಿಖಾ ವರದಿಯನ್ನು ಎಸ್‌ಐಟಿ ಇಂದು ಹೈಕೋರ್ಟ್‌ನ ದೇವಸ್ವಂ (ಮುಜರಾಯಿ)ಪೀಠಕ್ಕೆ ಸಲ್ಲಿಸಲಿದೆ.  ಶಬರಿಮಲೆ ಕ್ಷೇತ್ರ ಕಳವು ಪ್ರಕರಣದ ತನಿಖೆ ಹೈಕೋರ್ಟ್‌ನ ನೇರ ಮೇಲ್ನೋಟದಲ್ಲೇ ಈಗ ನಡೆಯುತ್ತಿದೆ.

ಇದರಂತೆ ಎಸ್.ಪಿ. ಶಶಿಧರನ್ ನೇತೃತ್ವದ ಎಸ್‌ಐಟಿ ತಂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ. ತನಿಖಾ ಪ್ರಗತಿಯ ವರದಿಯನ್ನು ಎಸ್‌ಐಟಿ ಪದೇ ಪದೇ ಹೈಕೋರ್ಟ್‌ಗೆ ಸಲ್ಲಿಸುತ್ತಾ ಬಂದಿದೆ. ಇದರ ಮೂರನೇ ವರದಿಯನ್ನು ಡಿ. ೩ರಂದು ಹೈಕೋರ್ಟ್‌ಗೆ ಸಲ್ಲಿಸಲಾಗಿತ್ತು. ಅದನ್ನು ಪರಿಶೀಲಿಸಿದ ಹೈಕೋರ್ಟ್, ತನಿಖೆ ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ತನಿಖಾ ತಂಡವನ್ನು ತೀವ್ರ ತರಾಟೆಗೂ ತೆಗೆದುಕೊಂಡಿತ್ತು ಮಾತ್ರವಲ್ಲ ಈ ಪ್ರಕರಣದಲ್ಲಿ ಶಾಮೀಲಾಗಿರುವುದಾಗಿ ಶಂಕಿಸಲಾಗುತ್ತಿರುವ ಗಣ್ಯವ್ಯಕ್ತಿಗಳತ್ತ ತನಿಖೆ ಯಾಕೆ ಸಾಗುತ್ತಿಲ್ಲವೆಂದೂ ನ್ಯಾಯಾಲಯ ಪ್ರಶ್ನಿಸಿತ್ತು. ಅದಕ್ಕೆ ಹೊಂದಿಕೊಂಡು ತನಿಖೆಯ ನಾಲ್ಕನೇ ವರದಿಯನ್ನು ತನಿಖಾ ತಂಡ ಇಂದು ನ್ಯಾಯಾಲಯಕ್ಕೆ ಸಲ್ಲಿಸಲಿದೆ. ಮಾತ್ರವಲ್ಲ ದೇವಸ್ವಂ ಮಂಡಳಿಯ ಸದಸ್ಯ ವಿಜಯ್ ಕುಮಾರ್, ಚೆನ್ನೈಯ ಸ್ಮಾರ್ಟ್ ಕ್ರಿಯೇ ಶನ್ಸ್‌ನ ಸಿಇಒ ಪಂಕಜ್ ಭಂಡಾರಿ ಮತ್ತು ಚಿನ್ನ ವ್ಯಾಪಾರಿ ಗೋವರ್ಧನ್‌ರ ಬಂಧನ ಇತ್ಯಾದಿ ವರದಿಗಳನ್ನೂ ಎಸ್‌ಐಟಿ ಇಂದು ನ್ಯಾಯಾಲಯಕ್ಕೆ ಸಲ್ಲಿಸಲಿದೆ. ಈ ಪ್ರಕರಣದ ಆರೋಪಿಗಳಾದ ದೇವಸ್ವಂ ಮಂಡಳಿ ಸದಸ್ಯ ಕೆ.ಪಿ. ಶಂಕರ್‌ದಾಸ್ ಸಲ್ಲಿಸಿದ ಜಾಮೀನು ಅರ್ಜಿಯನ್ನು ಇನ್ನೊಂದೆಡೆ ಸುಪ್ರೀಂ ಕೋರ್ಟ್‌ನ ಏಕ ಸದಸ್ಯ ಪೀಠ ಇಂದು ಪರಿಶೀಲಿಸಲಿದೆ.

You cannot copy contents of this page