ಬೆಂಗಳೂರು: ಕೇರಳ ಸರಕಾರ ಅನುಷ್ಠಾನಗೊಳಿಸಲು ಮುಂದಾಗಿರುವ ಮಲೆಯಾಳಂ ಭಾಷಾ ಮಸೂದೆ-೨೦೨೫ ಕಾಸರಗೋಡಿನ ಕನ್ನಡಿಗರಿಗೆ ತೀವ್ರ ಸಮಸ್ಯೆಯಾಗಲಿದ್ದು, ಅದನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇರಳ ಸರಕಾರ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರಲ್ಲಿ ಆಗ್ರಹಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಸುಧೀರ್ಘ ಸಂದೇಶ ಪ್ರಕಟಿಸಿರುವ ಸಿದ್ಧರಾಮಯ್ಯ ಒಂದು ವೇಳೆ ಕಾಸರಗೋಡಿನ ಕನ್ನಡಿಗರ ಹಿತ ನಿರ್ಲಕ್ಷಿಸಿ ಅವರ ಮೇಲೆ ಮಲೆಯಾಳಂ ಭಾಷೆಯನ್ನು ಹೇರಿದಲ್ಲಿ ನಮ್ಮ ಸರಕಾರ ಅವರ ಜೊತೆಗೆ ನಿಂತು ಸರ್ವ ರೀತಿಯ ಬೆಂಬಲ ನೀಡಲಿದೆ ಎಂದೂ ಸಿದ್ಧರಾಮಯ್ಯ ಹೇಳಿದ್ದಾರೆ. ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲೆಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸುವ ಕೇರಳ ಸರಕಾರದ ಪ್ರಸ್ತಾಪಿತ ಮಲೆಯಾಳ ಭಾಷಾ ಮಸೂದೆ ೨೦೨೫- ಸಂವಿಧಾನ ಖಾತರಿಮಾಡಿ ರುವ ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರವಾಗಿದೆ. ಈ ಕಾನೂನು ಜ್ಯಾರಿಗೆ ಬಂದರೆ ಕೇರಳದ ಗಡಿ ಜಿಲ್ಲೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಕಾಸರಗೋಡಿನಲ್ಲಿ ವಾಸಿಸುವ ಕನ್ನಡಿಗರು ತಮ್ಮ ಮಾತೃ ಭಾಷೆಯನ್ನು ಕಲಿಯುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕನ್ನು ದಮನಮಾಡುವ ಇಂತಹ ನಡೆಯನ್ನು ಕೇರಳ ಸರಕಾರದಿಂದ ನಾವು ನಿರೀಕ್ಷಿಸಿರಲಿಲ್ಲ. ಕಾಸರಗೋಡು ಇಂದು ಆಡಳಿತಾತ್ಮಕವಾಗಿ ಕೇರಳ ರಾಜ್ಯಕ್ಕೆ ಸೇರಿದ್ದರೂ, ಅದು ಭಾವನಾತ್ಮಕವಾಗಿ ಕರ್ನಾಟಕ ರಾಜ್ಯಕ್ಕೆ ಸೇರಿದ್ದಾಗಿದೆ. ಅಲ್ಲಿನ ಜನ ಕನ್ನಡ ಭಾಷೆ, ಸಂಸ್ಕೃತಿ,ಸಾಹಿತ್ಯದ ಜತೆ ಮಿಳಿತರಾಗಿದ್ದಾರೆ. ಅವರು ಕರ್ನಾಟಕದ ಕನ್ನಡಿಗರಿಗಿಂತ ಕಡಿಮೆಯೇನಲ್ಲ. ಅವರ ಹಿತವನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಭಾರತದ ಪ್ರತಿಯೊಬ್ಬ ಪ್ರಜೆಗೂ ಅವರ ಮಾತೃ ಭಾಷೆಯಲ್ಲಿ ಕಲಿಯುವ ಸ್ವಾತಂತ್ರವಿದೆ. ಭಾಷೆಯೂ ಸೇರಿದಂತೆ ಅಲ್ಪಸಂಖ್ಯಾತರ ಹಿತರಕ್ಷಣೆ ಯ ಸಂರಕ್ಷಣೆಯನ್ನು ಸಂವಿಧಾನದಲ್ಲಿ ಸ್ಪಷ್ಟಪಡಿಸಲಾಗಿದೆ. ಸಂವಿಧಾನದ 29 ಮತ್ತು 30ನೇ ಪರಿಚ್ಛೇದಗಳು ದೇಶದ ಯಾವುದೇ ಭಾಗದಲ್ಲಿ ವಾಸಿಸುತ್ತಿರುವ ವರಿಗೆ ತಮ್ಮ ಭಾಷೆ, ಲಿಪಿ ಮತ್ತು ಸಂಸ್ಕೃತಿ ರಕ್ಷಿಸಿಕೊಳ್ಳುವ ಹಕ್ಕನ್ನು ನೀಡಿದೆ. ಅವರಿಗೆ ತಮ್ಮ ಆಯ್ಕೆಯ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ನಡೆಸುವ ಹಕ್ಕನ್ನೂ ನೀಡುತ್ತಿದೆ. ಸಂವಿಧಾನದ 350(ಎ) ಪ್ರಾಥಮಿಕ ಹಂತದಲ್ಲಿ ಮಾತೃ ಭಾಷೆಯಲ್ಲಿ ಕಲಿಯುವ ಸ್ವಾತಂತ್ರವನ್ನೂ ನೀಡಿದೆ. ಸಂವಿಧಾನದ 350(ಬಿ) ಅಲ್ಪಸಂಖ್ಯಾತರ ರಕ್ಷಣೆಯನ್ನು ಖಾತರಿಪಡಿಸಿದೆ. ಆ ಹಿನ್ನೆಲೆಯಲ್ಲಿ ಯಾವುದೇ ಸರಕಾರ ಅಲ್ಪ ಸಂಖ್ಯಾತರ ಭಾಷಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡಬಾರದೆಂದೂ ಸಿದ್ಧರಾಮಯ್ಯ ಹೇಳಿದ್ದಾರೆ. ಈ ವಿಷಯದಲ್ಲಿ ಕಾಸರಗೋಡಿನ ಕನ್ನಡಿಗರಿಗೆ ಕರ್ನಾಟಕ ಸರಕಾರ ಸರ್ವ ರೀತಿಯ ಬೆಂಬಲ ನೀಡ ಲಿದೆ. ಮಸೂದೆಯನ್ನು ಜ್ಯಾರಿಗೊಳಿಸಲು ಹೊರಟರೆ ಕನ್ನಡಿಗರು ಅದನ್ನು ಒಕ್ಕೊರಲಿನಿಂದ ವಿರೋಧಿಸಲಿದ್ದಾರೆ. ಕಾಸರಗೋಡಿನ ಕನ್ನಡಿಗರ ಜತೆ ನಿಂತು ಅವರ ಭಾಷಾ ಸ್ವಾತಂತ್ರ್ಯದ ರಕ್ಷಣೆಗೆ ಸರ್ವ ರೀತಿಯ ಬೆಂಬಲವನ್ನೂ ನೀಡ ಲಾಗುವುದೆಂದು ಸಿದ್ಧರಾಮಯ್ಯ ಭರವಸೆ ನೀಡಿದ್ದಾರೆ. ಆದ್ದರಿಂದ ವಿವಾದಾತ್ಮಕವಾದ ಈ ಮಸೂದೆಯನ್ನು ತಕ್ಷಣ ಹಿಂತೆಗೆದುಕೊಳ್ಳಬೇಕೆಂದು ಕೇರಳ ಸರಕಾರದೊಡನೆ ಸಿದ್ಧರಾಮಯ್ಯ ಆಗ್ರಹಪಟ್ಟಿದ್ದಾರೆ.






