ತಿರುವಲ್ಲ: ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಮೂರನೇ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡದಿಂದ ಬಂಧಿತರಾಗಿ ನ್ಯಾಯಾಂಗ ಬಂಧನಕ್ಕೊಳಗಾದ ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್ನನ್ನು ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ತಿರುವೆಲ್ಲಾ ಮೆಜಿಸ್ಟ್ರೇಟ್ ನ್ಯಾಯಾಲಯ ಮೂರು ದಿನಗಳ ತನಕ ಎಸ್ಐಟಿಯ ವಶಕ್ಕೆ ಬಿಟ್ಟುಕೊಟ್ಟಿದೆ.
ಇದರಂತೆ ಯುವತಿಗೆ ಲೈಂಗಿಕ ಕಿರುಕುಳ ನೀಡಲಾಗಿರುವ ಹೋಟೆಲ್ ಎಂದು ಹೇಳಲಾಗುತ್ತಿರುವ ಪಾಲಕ್ಕಾಡ್ ಕೆಪಿಎಂ ರೆಸಿಡೆನ್ಸಿ ಹೋಟೆಲ್ ಕೊಠಡಿಗೆ ರಾಹುಲ್ ನನ್ನು ಎಸ್ಐಟಿ ಸಾಗಿಸಿ ಅಗತ್ಯದ ಮಾಹಿತಿ ಸಂಗ್ರಹಿಸತೊಡಗಿದೆ. ಮಾತ್ರವಲ್ಲದೆ ರಾಹುಲ್ನ ಎರಡು ಮೊಬೈಲ್ ಫೋನ್ಗಳನ್ನು ತನಿಖಾ ತಂಡ ವಶಕ್ಕೆ ತೆಗೆದುಕೊಂಡಿದೆ. ಆದರೆ ಆ ಫೋನ್ ತೆರೆಯಲು ಅದರ ಸೀಕ್ರೆಟ್ ಪಾಸ್ವರ್ಡ್ ನಂಬ್ರವನ್ನು ರಾಹುಲ್ ತನಿಖಾ ತಂಡಕ್ಕೆ ನೀಡಲು ತಯಾರಾಗಲಿಲ್ಲ. ಇದರಿಂದಾಗಿ ಫೋನ್ ತೆಗೆದು ಅದರಲ್ಲಿರುವ ಮಾಹಿತಿಗಳನ್ನು ಸಂಗ್ರಹಿಸಲು ತನಿಖಾ ತಂಡಕ್ಕೆ ಸಾಧ್ಯವಾಗಿಲ್ಲ. ಆ ಹಿನ್ನೆಲೆಯಲ್ಲಿ ಸೀಕ್ರೆಟ್ ಪಾಸ್ವರ್ಡ್ ನಂಬ್ರ ಪತ್ತೆಹಚ್ಚಲು ಆ ಫೋನ್ಗಳನ್ನು ಅಗತ್ಯದ ತಂತ್ರಜ್ಞಾನ ಉಪಯೋಗಿಸಿ ಬಳಸಲು ತನಿಖಾ ತಂಡ ಮುಂದಾಗಿದೆ. ಪಾಲಕ್ಕಾಡ್ನ ಹೋಟೆಲ್ಗೆ ನಾನು ಬಂದಿದ್ದೆನೆಂದೂ, ಅಲ್ಲಿ ಸಂತ್ರಸ್ಥೆ ಯುವತಿಯನ್ನು ಕಂಡಿದ್ದೆನೆಂಬುವುದನ್ನು ರಾಹುಲ್ ಇದೇ ಸಂದರ್ಭದಲ್ಲಿ ಎಸ್ಐಟಿಗೆ ನೀಡಿದ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದ ನೆನ್ನಲಾಗಿದೆ. ಇನ್ನೊಂದೆಡೆ ದೂರು ಗಾರಳಾದ ಸಂತ್ರಸ್ತೆಯ ಹೇಳಿಕೆಯನ್ನು ನೇರವಾಗಿ ದಾಖಲಿಸಿಕೊಳ್ಳಲು ಎಸ್ಐಟಿ ತೀರ್ಮಾನಿಸಿದೆ. ಮಾಹಿತಿ ಸಂಗ್ರಹಕ್ಕಾಗಿ ರಾಹುಲ್ನನ್ನು ಪೊಲೀಸರು ಹಲವೆಡೆಗಳಿಗೆ ಸಾಗಿಸಿದಾಗ ಮೂರೆಡೆಗಳಲ್ಲಿ ಪ್ರತಿಭಟನೆಗಾರರು ರಾಹುಲ್ ಮೇಲೆ ಕೋಳಿಮೊಟ್ಟೆ ಎಸೆದು ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದರು.







