ತಿರುವನಂತಪುರ: ಇಲ್ಲಿಗೆ ಸಮೀಪದ ಕಮಲೇಶ್ವರ ಆರ್ಯನ್‌ಕುಳಿಯಲ್ಲಿ ತಾಯಿ ಹಾಗೂ ಪುತ್ರಿ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಆರ್ಯನ್‌ಕುಳಿ ಶಾಂತಿಗಾರ್ಡನ್‌ನ ಸಜಿತ (54), ಪುತ್ರಿ ಗ್ರೀಮ (30) ಎಂಬಿವರನ್ನು ನಿನ್ನೆ ಸಂಜೆ ಮನೆಯ ಚಾವಡಿಯ ಸೋಫಾದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಆತ್ಮಹತ್ಯೆ ಗೈಯ್ಯುವ ಬಗ್ಗೆ ಸಂದೇಶವನ್ನು ಕುಟುಂಬದ ವಾಟ್ಸಪ್ ಗ್ರೂಪ್‌ನಲ್ಲಿ ರವಾನಿಸಿದ ಬಳಿಕ ಇವರಿಬ್ಬರೂ ಆತ್ಮಹತ್ಯೆ ಗೈದಿರಬೇಕೆನ್ನಲಾಗಿದೆ. ‘ಸಯನೈಡ್ ಸೇವಿಸಿ ಆತ್ಮಹತ್ಯೆ ಮಾಡುತ್ತಿದ್ದೇವೆ’ ಎಂಬ ಸಂದೇಶ ಗ್ರೂಪ್‌ನಲ್ಲಿ ಹಂಚಿಕೊಂಡಿದ್ದು, ಕೂಡಲೇ ಸಂಬಂಧಿಕರು ಹಾಗೂ ನೆರೆಮನೆ ನಿವಾಸಿಗಳು ಮನೆಗೆ ತಲುಪಿದ್ದಾರೆ. ಮನೆಯ ಬಾಗಿಲು ತೆರೆದು ಒಳಪ್ರವೇಶಿಸಿದಾಗ ಸೋಫಾದಲ್ಲಿ ಪರಸ್ಪರ ಕೈ ಬೆಸೆದುಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಸಂದೇಶದ ಸೂಚನೆಗಳನ್ನು ಗಣನೆಗೆ ತೆಗೆದು ಸಯನೈಡ್ ಸೇವಿಸಿ ಮೃತಪಟ್ಟಿರಬೇಕೆಂದು ಪ್ರಾಥಮಿಕವಾಗಿ ಪೊಲೀಸರು ಶಂಕಿಸಿದ್ದಾರೆ. ಕುಟುಂಬದಲ್ಲಿ ಉಂಟಾಗಿರುವ ತೀವ್ರ ಮಾನಸಿಕ ಅಸ್ವಸ್ಥತೆಗಳು ಆತ್ಮಹತ್ಯೆಗೆ ಕಾರಣವೆನ್ನಲಾಗಿದೆ.
ಮನೆಯ ಯಜಮಾನ ಮೂರು ತಿಂಗಳ ಹಿಂದೆ ಮೃತಪಟ್ಟಿದ್ದರು. ಇದರ ನೋವಿನಿಂದ ಕುಟುಂಬ ಮುಕ್ತವಾಗಿರಲಿಲ್ಲ. ಆರು ವರ್ಷದ ಹಿಂದೆ ವಿವಾಹಿತೆಯಾದ ಗ್ರೀಮಾಳ ಕುಟುಂಬ ಜೀವನದಲ್ಲಿ ದೊಡ್ಡ ಸಮಸ್ಯೆಗಳಿತ್ತೆನ್ನಲಾಗಿದೆ. ವಿದೇಶದಲ್ಲಿರುವ ಪತಿ ಊರಿಗೆ ತಲುಪಿದ ಬಳಿಕ ಅವರಿಬ್ಬರ ಮಧ್ಯೆಗಿರುವ ಸಮಸ್ಯೆಗಳು ಹೆಚ್ಚಿದ್ದು, ಇದು ತಾಯಿ, ಪುತ್ರಿಯನ್ನು ಮಾನಸಿಕವಾಗಿ ಕುಗ್ಗಿಸಿರಬೇಕೆನ್ನಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಯ ಬಳಿಕ ಶವಾಗಾರದಲ್ಲಿರಿಸಲಾಗಿದೆ. ಇಂದು ತಿರುವನಂತಪುರ ಮೆಡಿಕಲ್ ಕಾಲೇಜು ಶವಾಗಾರದಲ್ಲಿ ನಡೆಯುವ ಹೆಚ್ಚಿನ ತನಿಖೆಯ ಬಳಿಕವೇ ಮರಣ ಕಾರಣಕ್ಕೆ ಸಂಬಂಧಿಸಿದ ಔದ್ಯೋಗಿಕ ಖಚಿತತೆ ಉಂಟಾಗಲಿದೆ. ಪೂಂದುರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.







