ಕಾಸರಗೋಡು: ಬೈಕ್ ಸಹಿತ ತೆರಳಿದ ಯುವಕ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ವಟ್ಟಂತ್ತಟ್ಟ ಎರಿಂಞಿಪುಳ ಹೌಸ್ನ ಜಿತೇಶ್ (32) ನಾಪತ್ತೆಯಾದ ಯುವಕ. ಈ ಬಗ್ಗೆ ತಂದೆ ಸಿ. ಬಾಲನ್ ನೀಡಿದ ದೂರಿನಂತೆ ಬೇಡಗಂ ಪೊಲೀಸರು ಕೇಸು ದಾಖಲಿಸಿದ್ದಾರೆ. ನಿನ್ನೆ ಮಧ್ಯಾಹ್ನ 1 ಗಂಟೆ ಬಳಿಕ ಜಿತೇಶ್ ಮನೆಯಿಂದ ಬೈಕ್ನಲ್ಲಿ ತೆರಳಿದ್ದನು. ಸಂಜೆಯಾದರೂ ಮರಳಿ ಬಂದಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ. ಜಿತೇಶ್ ತೆರಳುವಾಗ ಮೊಬೈಲ್ ಫೋನ್ ಕೊಂಡೊಯ್ದಿಲ್ಲ. ಇದರಿಂದ ಸಂಶಯಗೊಂಡು ಕೊಠಡಿಯಲ್ಲಿ ಪರಿಶೀಲಿಸಿದಾಗ ಪತ್ರವೊಂದು ಪತ್ತೆಯಾಗಿದೆ. “ಇಲ್ಲಿಯ ಜೀವನ ಸಾಕಾಗಿದೆ. ಮನಸ್ಸಿಗೆ ಸಮಾಧಾನವಿಲ್ಲ. ತಾನು ಸ್ವಲ್ಪ ಕಾಲ ಯಾತ್ರೆ ಹೋಗುತ್ತೇನೆ. ತನಗಾಗಿ ಹುಡುಕಬೇಡಿ. ತನ್ನ ಹಿಂದೆ ಬಂದರೆ ತಾನಿರಲಾರೆ” ಎಂದು ಪತ್ರದಲ್ಲಿ ಬರೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಜಿತೇಶ್ ಕರ್ನಾಟಕಕ್ಕೆ ಹೋಗಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ. ಯುವಕ ನಾಪತ್ತೆಯಾದ ವಿಷಯವನ್ನು ಬೇಡಗಂ ಪೊಲೀಸರು ಕರ್ನಾಟಕ ಪೊಲೀಸರಿಗೆ ತಿಳಿಸಿದ್ದಾರೆ.







