ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಮೋರಿ ಸಂಕದೊಳಗೆ ಯುವಕನೋರ್ವ ನಿಗೂಢ ರೀತಿ ಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಬಂದ್ಯೋಡು ಮಳ್ಳಂಗೈಯಲ್ಲಿರುವ ಮೋರಿ ಸಂಕದೊಳಗೆ ನಿನ್ನೆ ಸಂಜೆ ವೇಳೆ ಮೃತದೇಹ ಕಂಡುಬಂದಿದೆ. ಒಡಿಸ್ಸಾದ ಜೈಪುರ ಪತರಾಜಪುರ್ ಬಲಿಚಂದ್ರಪುರದ ಶಹಜುದ್ದೀನ್ ಸಹ (43) ಮೃತಪಟ್ಟ ವ್ಯಕ್ತಿಯೆಂದು ಗುರುತಿಸಲಾಗಿದೆ. ಮೃತವ್ಯಕ್ತಿಯ ಅಂಗಿ ಜೇಬಿನಲ್ಲಿ ಆಧಾರ್ ಕಾರ್ಡ್ ಪತ್ತೆಯಾಗಿತ್ತು. ಅದರಲ್ಲಿರುವ ವಿಳಾಸದ ಆಧಾರದಲ್ಲಿ ಮೃತ ವ್ಯಕ್ತಿಯ ಗುರುತು ಹಚ್ಚಲಾಗಿದೆ. ಶಹಜುದ್ದೀನ್ ಸಹ ಒಡಿಸ್ಸಾದಿಂದ ಇಲ್ಲಿಗೆ ಕೆಲಸಕ್ಕೆ ಬಂದಿರಬಹುದೆಂದು ಅಂದಾಜಿ ಲಾಗಿದೆ. ಇದೇ ವೇಳೆ ಇವರು ಮೋರಿ ಸಂಕದೊಳಗೆ ಪ್ರವೇಶಿಸಲು ಹಾಗೂ ಅಲ್ಲಿ ಸಾವಿಗೀಡಾಗಲು ಕಾರಣವೇನೆಂದು ತಿಳಿದುಬಂದಿಲ್ಲ. ವಿಷಯ ತಿಳಿದು ಕುಂಬಳೆ ಎಸ್‌ಐಗಳಾದ ಪಿ. ಸನಿತ್, ಅನಂತಕೃಷ್ಣನ್ ಆರ್ ಮೆನೋನ್ ಎಂಬಿವರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಿದ್ದಾರೆ.
ಸಾವಿಗೆ ಕಾರಣವೇನೆಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬರಲಿದೆಯೆಂದು ಪೊಲೀಸರು ತಿಳಿಸಿದ್ದಾರೆ. ವ್ಯಕ್ತಿ ಬಂದ್ಯೋಡು ಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರೇ ಎಂದು ತಿಳಿಯಲು ಪೊಲೀಸರು ಅನ್ಯರಾಜ್ಯ ಕಾರ್ಮಿಕರೊಂದಿಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಆಧಾರ್ ಕಾರ್ಡ್‌ನಲ್ಲಿರುವ ವಿಳಾಸದ ಆಧಾರದಲ್ಲಿ ಒಡಿಸ್ಸಾದಲ್ಲಿರುವ ಸಂಬಂಧಿಕರನ್ನು ಸಂಪರ್ಕಿಸಲು ಕ್ರಮ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.






