ಮಡಿಕೈ ವೆಳ್ಳೂಡದಲ್ಲಿ ಚಿರತೆ ಹಟ್ಟಿಯಿಂದ ಕರುವನ್ನು ಕಚ್ಚಿಕೊಂಡು ಹೋಗಿ ಕೊಂದು ತಿಂದ ಸ್ಥಿತಿಯಲ್ಲಿ

ಹೊಸದುರ್ಗ: ಸ್ವಲ್ಪ ಸಮಯದ ವಿರಾಮದ ಬಳಿಕ ಮಡಿಕೈ ಪಂಚಾಯತ್‌ನ ವೆಳ್ಳುಡದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದೆ. ಹಟ್ಟಿಗೆ ನುಗ್ಗಿದ ಚಿರತೆ ಕರುವನ್ನು ಕಚ್ಚಿಕೊಂಡು ಹೋಗಿ ಕೊಂದುತಿಂದಿದೆ. ಮಡಿಕೈ ಪಂಚಾಯತ್‌ನ ಹೈನುಗಾರ ಸುರೇಶ್‌ರ ಹಟ್ಟಿಯಿಂದ ಚಿರತೆ ಕರುವನ್ನು ಕಚ್ಚಿಕೊಂಡು ಹೋಗಿದೆ. ಹಟ್ಟಿಯಲ್ಲಿ ಸುಮಾರು 40ರಷ್ಟು ದನಗಳಿವೆ. ಎಂದಿನಂತೆ ನಿನ್ನೆ ರಾತ್ರಿ 7 ಗಂಟೆಗೆ ದನಗಳಿಗೆ ಮೇವು ನೀಡಲು ಸುರೇಶ್ ಹಟ್ಟಿಗೆ ತಲುಪಿದಾಗ ಕರು ನಾಪತ್ತೆಯಾದ ಬಗ್ಗೆ ತಿಳಿದು ಬಂದಿದೆ. ಪರಿಸರವೆಲ್ಲ ಹುಡುಕಾಡಿದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ರಾತ್ರಿಯಾದ ಕಾರಣ ಹೆಚ್ಚು ಹುಡುಕಾಟ ನಡೆಸಿರಲಿಲ್ಲ. ಇಂದು ಬೆಳಿಗ್ಗೆ ವ್ಯಾಪಕ ಹುಡುಕಾಟ ನಡೆಸಿದಾಗ ಸಮೀಪದ ಕಾಡಿನಲ್ಲಿ ಕರುವಿನ ಅವಶಿಷ್ಟಗಳು ಕಂಡು ಬಂದಿದೆ.

ಕರುವನ್ನು ಕಚ್ಚಿ ಎಳೆದೊಯ್ದ ದಾರಿಯಲ್ಲೇ ಸಾಗಿದಾಗ ಕಳೇಬರ ಪತ್ತೆಯಾಗಿದೆ. ಮಾಹಿತಿ ತಿಳಿದು ಹಲವಾರು ಮಂದಿ ಸ್ಥಳಕ್ಕೆ ತಲುಪಿದ್ದಾರೆ. ಮೂರು ತಿಂಗಳ ಹಿಂದೆ ಈ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ ಗೊಂಡಿತ್ತೆಂದು ಹೇಳಲಾಗುತ್ತಿದೆ.

You cannot copy contents of this page