ಕಾಸರಗೋಡು: ನಗರ ವ್ಯಾಪ್ತಿಯಲ್ಲಿ ಹಾನಿಗೊಂಡ ರಸ್ತೆಗಳನ್ನು ಸೂಕ್ತ ಸಮಯದಲ್ಲಿ ದುರಸ್ತಿಗೊಳಿಸದಿರುವುದು, ನಗರದಲ್ಲಿ ಹೆಚ್ಚುತ್ತಿರುವ ತ್ಯಾಜ್ಯ ಸಮಸ್ಯೆ ಹಿನ್ನೆಲೆಯಲ್ಲಿ ನಗರಸಭಾ ಕೌನ್ಸಿಲ್ ಸಭೆಯಲ್ಲಿ ಆಡಳಿತ ಸಮಿತಿ ವಿರುದ್ಧ ಕೌನ್ಸಿಲರ್‌ಗಳು ತೀವ್ರ ಟೀಕೆ ವ್ಯಕ್ತಪಡಿಸಿದರು. ರಸ್ತೆಗಳು ಹಾನಿಗೊಂಡು ಹೊಂಡಗಳಾಗುತ್ತಿವೆ ಎಂದು ಗುರುಪ್ರಸಾದ್ ಪ್ರಭು ಆರೋಪಿಸಿದ್ದಾರೆ.
ಜಲಪ್ರಾಧಿಕಾರ ಹಾಗೂ ಕೆಎಸ್‌ಇಬಿ ತಮ್ಮ ಕೆಲಸಗಳಿಗಾಗಿ ರಸ್ತೆಗಳನ್ನು ಹೊಂಡ ಮಾಡಿದ ಬಳಿಕ ಅದನ್ನು ಪೂರ್ವಸ್ಥಿತಿಯಂತೆ ಮಾಡದಿರು ವುದು ನಗರದಲ್ಲಿ ಪ್ರಯಾಣ ಸಂಕಷ್ಟ ಸೃಷ್ಟಿಸುತ್ತಿರುವುದಾಗಿ ಅವರು ಆರೋಪಿಸಿ ದರು. ಮಳೆಗಾಲ ತೀವ್ರಗೊಂಡಾಗ ರಸ್ತೆಗಳ ಸಣ್ಣ ಹೊಂಡಗಳು ಕೂಡಾ ದೊಡ್ಡ ಹೊಂಡಗಳಾಗಿ ಬದಲಾಗಿ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಜಲ ಪ್ರಾಧಿಕಾರ, ಕೆಎಸ್‌ಇಬಿ ರಸ್ತೆ ಹೊಂಡ ಮಾಡುವುದಕ್ಕೆ ನಗರಸಭೆಗೆ ಹಣ ಪಾವತಿಸುತ್ತಿದೆ. ಆದುದರಿಂದ ಅವರ ಕೆಲಸ ಮುಗಿದ ಕೂಡಲೇ ರಸ್ತೆಯನ್ನು ದುರಸ್ತಿಗೊಳಿಸಬೇಕಾಗಿರುವುದು ನಗರಸಭೆಯ ಹೊಣೆಯಾಗಿದೆ. ಆದರೆ ಈ ಹೊಣೆಯನ್ನು ನಗರಸಭೆ ಸೂಕ್ತವಾಗಿ ನಿರ್ವಹಿಸುತ್ತಿಲ್ಲವೆಂದು ಕೌನ್ಸಿಲರ್ ಆರೋಪಿಸಿದರು.
ಇದೇ ವೇಳೆ ನಗರದಲ್ಲಿ ಹೆಚ್ಚುತ್ತಿರುವ ತ್ಯಾಜ್ಯ ಸಮಸ್ಯೆ ನಿಯಂತ್ರಣಾತೀತವಾಗಿ ಬೆಳೆಯುತ್ತಿದೆ ಎಂದು ಕೌನ್ಸಿಲರ್ ಹರೀಶ್ ಕೆ.ಆರ್. ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದರು. ಹೊಸ ಬಸ್ ನಿಲ್ದಾಣ ಪರಿಸರದ ಮಲಿನ ಜಲ ಸಮಸ್ಯೆ ನಗರಸಭಾ ಆಡಳಿತಕ್ಕೆ ನಾಚಿಗೆಗೇಡು ಎಂದು ಅವರು ನುಡಿದರು. ಆರೋಗ್ಯಕ್ಕೆ ಬೆದರಿಕೆ ಸೃಷ್ಟಿಸಬಹುದಾದ ಈ ಸಮಸ್ಯೆ ಬಗ್ಗೆ ನಗರಸಭೆ ಶೀಘ್ರ ಶಾಶ್ವತ ಪರಿಹಾರ ಕಾಣಬೇಕೆಂದು ಅವರು ಆಗ್ರಹಿಸಿದರು. ಅಶೋಕನಗರ ಕ್ವಾರ್ಟರ್ಸ್, ಮೈದಾನ, ತಾಳಿಪಡ್ಪು ಮೈದಾನ ಎಂಬಿ ವುಗಳ ಸಹಿತ ನಗರದ ಹಲವು ರಸ್ತೆಗಳು, ಸ್ಥಳಗಳು ಇದುವರೆಗೆ ನಗರಸಭೆಯ ಔದ್ಯೋಗಿಕ ಸೊತ್ತು ಯಾದಿಯಲ್ಲಿ ಒಳ ಗೊಂಡಿಲ್ಲವೆಂದು ಕೌನ್ಸಿಲರ್ ರವೀಂದ್ರ ಪೂಜಾರಿ ಸೂಚಿಸಿದರು. ಈ ಸ್ಥಳಗಳ ನ್ನೆಲ್ಲಾ ಆದಷ್ಟು ಬೇಗ ನಗರಸಭೆಯ ಸೊತ್ತು ಆಗಿ ಬದಲಿಸಿ ಅಭಿವೃದ್ಧಿ ಚಟುವಟಿಕೆಗಳನ್ನು ದಕ್ಷತೆಯಿಂದ ನಡೆಸಬೇಕೆಂದು ಅವರು ಆಗ್ರಹಿಸಿದರು







