ತರವಾಡು ಕ್ಷೇತ್ರಕ್ಕೆ ತೆರಳುತ್ತಿದ್ದ ವ್ಯಕ್ತಿಗೆ ಹಲ್ಲೆಗೈದು: ಹಣ ದರೋಡೆಗೈದ ಆರೋಪಿಗಳಿಗಾಗಿ ಶೋಧ

ಸೀತಾಂಗೋಳಿ: ತರವಾಡು ಕ್ಷೇತ್ರಕ್ಕೆ ತೆರಳುತ್ತಿದ್ದ ವ್ಯಕ್ತಿಯನ್ನು ದಾರಿಮಧ್ಯೆ ತಡೆದು ನಿಲ್ಲಿಸಿ  ಹಲ್ಲೆಗೈದು  ೪೩,೫೦೦  ರೂಪಾಯಿ ಗಳಿದ್ದ ಬ್ಯಾಗ್‌ನ್ನು ದರೋಡೆಗೈದ ಸಂಬಂಧ ಆರೋಪಿಗಾಗಿ ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ.  ಕಟ್ಟತ್ತಡ್ಕ ಎಡನಾಡಿನ ಈಶ್ವರ (೬೨) ಎಂಬವರ ಕೈಯಿಂದ ಹಣವಿದ್ದ ಬ್ಯಾಗ್‌ನ್ನು ದರೋಡೆಗೈಯ್ಯಲಾಗಿದೆ.  ಪೆರ್ಮುದೆ ಮುನ್ನೂರು ಹೊಸಮನೆ ತರವಾಡು ಕ್ಷೇತ್ರದ ಪದಾಧಿಕಾರಿಯಾದ ಈಶ್ವರ ತರವಾಡಿನಲ್ಲಿ ಸಂಕ್ರಮಣ ಕಾರ್ಯಕ್ರಮಕ್ಕೆಂದು  ತೆರಳುತ್ತಿದ್ದ ವೇಳೆ ನಿನ್ನೆ ಮಧ್ಯಾಹ್ನ ೨ ಗಂಟೆ ವೇಳೆ ಅವರಿಗೆ ಹಲ್ಲೆಗೈದು ಹಣ ದರೋಡೆ ನಡೆಸಲಾಗಿದೆ. ಮುನ್ನೂರಿನಲ್ಲಿ ಬಸ್ ಇಳಿದು ನಡೆದು ಹೋಗುತ್ತಿದ್ದಾಗ ನಿರ್ಜನ ಸ್ಥಳದಲ್ಲಿ ಸ್ಕೂಟರ್‌ನಲ್ಲಿ ತಲುಪಿದ ಇಬ್ಬರು ಈಶ್ವರರನ್ನು ತಡೆದು ನಿಲ್ಲಿಸಿ ಹಲ್ಲೆಗೈದಿದ್ದಾರೆನ್ನ ಲಾಗಿದೆ. ಬಳಿಕ ಈಶ್ವರರ ಕೈಯಲ್ಲಿದ್ದ ಬ್ಯಾಗ್ ಹಾಗೂ ಅದರಲ್ಲಿದ್ದ ೪೩,೫೦೦ ರೂಪಾಯಿಯನ್ನು ದುಷ್ಕರ್ಮಿಗಳು ಕಸಿದು ಪರಾರಿಯಾಗಿರುವುದಾಗಿ ದೂರಲಾ ಗಿದೆ. ಬೊಬ್ಬೆ ಕೇಳಿ ತಲುಪಿದ ಸ್ಥಳೀಯರು ಈಶ್ವರರನ್ನು ಕುಂಬಳೆ ಪೊಲೀಸ್ ಠಾಣೆಗೆ ತಲುಪಿಸಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಲು ವಿವಿಧ ಪ್ರದೇಶಗಳ ಸಿಸಿ ಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page