ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಉದರ ಸಂಬಂಧ ಕಾಯಿಲೆಗೆ ಶಸ್ತ್ರಚಿಕಿತ್ಸೆಗೊಳಗಾದ ಬೇಡಡ್ಕ ತಲೆಕುನ್ನಿನ ಮುಹಮ್ಮದ್ ಇಯಾಸ್ (9) ಬಳಿಕ ಸಾವನ್ನಪ್ಪಿದ ಪ್ರಕರಣದ ತನಿಖೆ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಯ ವಿಶೇಷ ತಂಡ ತನಿಖೆ ನಡೆಸಲಿದೆ.
ಬಾಲಕನ ಮೃತದೇಹವನ್ನು ನಿನ್ನೆ ಪರಿಯಾರಂನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು. ನಂತರ ಮೃತದೇಹದ ಆಂತರಿಕ ಅವಯವಗಳನ್ನು ಉನ್ನತ ಮಟ್ಟದ ಪರೀಕ್ಷೆಗಾಗಿ ಕಲ್ಲಿಕೋಟೆ ವೈದ್ಯಕೀಯ ಕಾಲೇಜಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಅದರ ವರದಿ ಕೈಸೇರಿದ ಬಳಿಕವಷ್ಟೇ ಬಾಲಕನ ಸಾವಿಗೆ ಕಾರಣ ಸ್ಪಷ್ಟಗೊಳ್ಳಲಿದೆ ಯೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕಾಸರಗೋಡು ಪೊಲೀಸರು ಸದ್ಯ ಅಸಹಜ ಸಾವುಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯ ಅಂಗವಾಗಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ಹೇಳಿಕೆಯನ್ನು ಪೊಲೀಸರು ದಾಖಲಿಸಿ ಕೊಂಡಿದ್ದಾರೆ. ಇದರ ಹೊರತಾಗಿ ಶಸ್ತ್ರಕ್ರಿಯೆ ವೇಳೆ ಆಪರೇಶನ್ ಥಿಯೇಟರ್‌ನಲ್ಲಿ ವೈದ್ಯರ ಜತೆಗೆ ಸಹಕರಿಸಿದ್ದ ಇತರ ಸಿಬ್ಬಂದಿಗಳ ಹೇಳಿಕೆಯನ್ನು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.






