ಅಧ್ಯಾಪಕನ ಮನೆಯಲ್ಲಿ ಸಿದ್ಧಗೊಳ್ಳುತ್ತಿದೆ 60 ಗಣಪತಿ ವಿಗ್ರಹಗಳು

ಉಪ್ಪಳ: ಅಕ್ಷರ ಕಲಿಸುವ ಗುರುವಿನ ಮನೆಯಲ್ಲಿ ಜ್ಞಾನದ ಅಧಿಪತಿಯಾದ ಗಣಪತಿಯ ವಿಗ್ರಹಗಳು ತುಂಬಿ ಕೊಂಡಿವೆ. ಚೌತಿ ಹಬ್ಬ ಸಮೀಪಿಸುತ್ತಿದ್ದಂತೆ ಮಂಜೇಶ್ವರ ಶ್ರೀಮತ್ ಅನಂತೇಶ್ವರ ಕ್ಷೇತ್ರ ಪರಿಸರ ನಿವಾಸಿಯಾದ ಅಧ್ಯಾಪಕನ ಮನೆಯಲ್ಲಿ ಗಣಪತಿ ವಿಗ್ರಹ ಸಿದ್ದಗೊಳ್ಳುತ್ತಿದೆ. ಮಂಜೇಶ್ವರ ಎಸ್.ಎ.ಟಿ ಶಾಲೆಯ ಅಧ್ಯಾಪಕ ಲಕ್ಷ್ಮೀದಾಸ್ ಪ್ರಭು ಹಾಗೂ ಸಹೋದರ ದೇವದಾಸ್ ಪ್ರಭು ಗಣಪತಿ ವಿಗ್ರಹ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮನೆಗಳಲ್ಲಿ ಪೂಜಿಸುವ ವಿಗ್ರಹ ಗಳನ್ನೇ ಹೆಚ್ಚಾಗಿ ಇವರು ನಿರ್ಮಿಸುತ್ತಿದ್ದಾರೆ. ಈ ಬಾರಿ 60 ವಿಗ್ರಹಗಳು ಸಿದ್ದಗೊಳ್ಳುತ್ತಿದೆ. ಮಂಜೇಶ್ವರ, ಕುಂಬಳೆ, ಕಾಸರಗೋಡು, ಕಾಂಞಗಾಡ್, ಪಯ್ಯನ್ನೂರು, ಕಣ್ಣೂರು, ತಲಶ್ಯೇರಿ, ಕಲ್ಲಿಕೋಟೆ ಪ್ರದೇಶಗಳಿಗಾಗಿ ವಿಗ್ರಹಗಳು ರಚನೆಯಾಗುತ್ತಿದೆ. ಇವರಿಗೆ ಪಾರಂಪರಿಕ ವಾಗಿ ಬಂದ ಕಲೆ ಇದಾಗಿದ್ದು, ಮನೆಯಲ್ಲಿ ಎಲ್ಲಾ ಸದಸ್ಯರು ಸಹಕಾರ ನೀಡುತ್ತಿರುವುದಾಗಿ ಲಕ್ಷ್ಮೀದಾಸ್ ಪ್ರಭು ತಿಳಿಸಿದ್ದಾರೆ.

You cannot copy contents of this page