ಶಾರ್ಜಾದಲ್ಲಿ ಕಟ್ಟಡದಿಂದ ಬಿದ್ದು ಮೃತಪಟ್ಟ ಮೊಗ್ರಾಲ್ ನಿವಾಸಿ ಬಾಲಕಿಯ ಅಂತ್ಯಸಂಸ್ಕಾರ

ಕಾಸರಗೋಡು: ಶಾರ್ಜಾದ ಅಲ್ನಬ್ಬ ಎಂಬಲ್ಲಿನ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟ ಮೊಗ್ರಾಲ್ ನಿವಾಸಿ ಬಾಲಕಿಯ  ಮೃತದೇಹದ ಅಂತ್ಯಸಂಸ್ಕಾರ ನಿನ್ನೆ  ಮೊಗ್ರಾಲ್ ಚಳಿಯಂಗೋಡು ಜುಮಾ ಮಸೀದಿ ಪರಿಸರದಲ್ಲಿ ನಡೆಸಲಾಯಿತು.  ಮೊಗ್ರಾಲ್ ಕಾಡಿಯಂಕುಳಂ ಸಫ ಮಂಜಿಲ್‌ನ ಮುಬಾರಕ್ ಅಲಿ-ಮುರ್ಶಿದಾ ದಂಪತಿಯ ಏಕೈಕ ಪುತ್ರಿ ಸಫ (7) ಮೃತಪಟ್ಟ ದುರ್ದೈವಿಯಾಗಿದ್ದಾಳೆ. ಈಕೆ ಶಾರ್ಜಾದ ಖಾಸಗಿ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಕಳೆದ ಸೋಮವಾರ ದುರ್ಘಟನೆ ಸಂಭವಿಸಿದೆ.

ಅಂದು ಬೆಳಿಗ್ಗೆ ತಾಯಿ ಮುರ್ಶಿದ ಶಾರ್ಜಾದ ರಿಯಲ್ ಎಸ್ಟೇಟ್ ಸಂಸ್ಥೆಯಲ್ಲಿ ಕೆಲಸಕ್ಕಾಗಿ  ತೆರಳಿದ್ದರು.  ಆಟವಾಡುತ್ತಿದ್ದಾಗ ಕಿಟಿಕಿಯಿಂದ ಹೊರಕ್ಕೆ ಬಿದ್ದು ಬಾಲಕಿ ಗಂಭೀರ ಗಾಯಗೊಂಡಿದ್ದಳು. ಕೂಡಲೇ  ಸ್ಥಳೀಯ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಘಟನೆ ವೇಳೆ ತಂದೆ ಮುಬಾರಕ್‌ಅಲಿ ಫ್ಲಾಟ್‌ನಲ್ಲಿದ್ದರು.  ಮುಬಾರಕ್ ಅಲಿ ದುಬಾಯಿಯ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನೀಶ್ಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.  ಬೇಸಿಗೆ ರಜೆಯಲ್ಲಿ ಊರಿಗೆ ಬಂದಿದ್ದ ಕುಟುಂಬ ಇತ್ತೀಚೆಗಷ್ಟೇ ಮರಳಿ ಶಾರ್ಜಾಕ್ಕೆ ತೆರಳಿತ್ತು.  ಬಾಲಕಿಯ ನಿಧನಕ್ಕೆ ಮೊಗ್ರಾಲ್ ದೇಶೀಯ ವೇದಿ, ದೀನಾರ್ ಯುವಜನಸಂಘ ಸಂತಾಪ ಸೂಚಿಸಿದೆ.

You cannot copy contents of this page