ಕಲ್ಲಿಕೋಟೆ: ಕನಿಷ್ಠ ಪ್ರಯಾಣ ದರವನ್ನು 15 ರೂಪಾಯಿಗೇರಿಸುವಂತೆ ಒತ್ತಾಯಿಸಿ ರಾಜ್ಯದಲ್ಲಿ ಚಳವಳಿ ನಡೆಸಲು ಆಲ್ಕೇರಳ ಪ್ರೈವೇಟ್ ಬಸ್ ಆಪರೇಟರ್ಸ್ ಆರ್ಗನೈಸೇಶನ್ ತೀರ್ಮಾನಿಸಿದೆ. ಚಳವಳಿಯ ದಿನಾಂಕ ಮುಂದೆ ಘೋಷಿಸಲಾಗುವುದು. ಅದರ ಮುಂಚಿತ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರನ್ನು ಭೇಟಿಯಾಗಿ ಚರ್ಚೆ ನಡೆಸಲಾಗುವುದೆಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಇರುವ ಕನಿಷ್ಠ ಪ್ರಯಾಣ ದರವನ್ನು 10 ರೂಪಾಯಿಯಿಂದ 15 ರೂಪಾಯಿಗೆ ಹೆಚ್ಚಿಸಬೇಕು, ವಿದ್ಯಾರ್ಥಿಗಳ ಕನಿಷ್ಠ ಪ್ರಯಾಣ ದರವನ್ನು ಹೆಚ್ಚಿಸಬೇಕು, ನಿರಂತರ ಇಂಧನ ಬೆಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಬಸ್ಗಳಿಗೆ ಡೀಸಲ್ ಸಬ್ಸಿಡಿ ಮಂಜೂರು ಮಾಡಬೇಕು ಮೊದಲಾದ ಬೇಡಿಕೆಗಳನ್ನು ಬಸ್ ಮಾಲಕರು ಮುಂದಿರಿಸಿದ್ದಾರೆ.






