ಆನ್‌ಲೈನ್ ವಂಚನೆ ಪತ್ತೆಗೆ ಆಪರೇಷನ್ ಸೈ: ಉಪ್ಪಳ, ನೀಲೇಶ್ವರ ನಿವಾಸಿಗಳ ಬ್ಯಾಂಕ್  ಖಾತೆಗಳಲ್ಲಿ ಲಕ್ಷಾಂತರ ರೂ. ಪತ್ತೆ

ಕಾಸರಗೋಡು: ಆನ್‌ಲೈನ್ ಟ್ರೇಡಿಂಗ್  ಹೆಸರಲ್ಲಿ ಆನ್‌ಲೈನ್ ಸೈಬರ್ ವಂಚಕರಿಗೆ ಬಾಡಿಗೆಗೆ ಬ್ಯಾಂಕ್ ಖಾತೆ ನೀಡಿದವರ ಬಗ್ಗೆ ಪೊಲೀಸರು ನಡೆಸಿದ ತನಿಖೆಯಲ್ಲಿ  ಉಪ್ಪಳ ಮತ್ತು ನೀಲೇಶ್ವರದ ಇಬ್ಬರ  ಬ್ಯಾಂಕ್ ಖಾತೆಗಳಿಗೆ ಆನ್‌ಲೈನ್ ಮೂಲಕ ಲಕ್ಷಾಂತರ ರೂಪಾಯಿ ಬಂದು ಸೇರಿರುವುದನ್ನು  ಪತ್ತೆಹಚ್ಚಲಾ ಗಿದೆ.  ಇದರಂತೆ ಉಪ್ಪಳ ಕೈಕಂಬ ಬಳಿಯ ನಿವಾಸಿಯೋರ್ವನ ಎಸ್‌ಬಿಐ ಬ್ಯಾಂಕ್ ಖಾತೆಗೆ 9.10 ಲಕ್ಷ ರೂ.  ತಲುಪಿರುವುದಾಗಿ ಪತ್ತೆಹಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ವ್ಯಕ್ತಿಯ ಬ್ಯಾಂಕ್ ಖಾತೆಗೆ 2026 ಫೆಬ್ರವರಿ 24ರಂದು 6,10,584 ರೂ. ಹಾಗೂ ಮಾರ್ಚ್ ೧೧ರಂದು ೩ ಲಕ್ಷ ರೂಪಾಯಿ ಆನ್‌ಲೈನ್ ಮೂಲಕ ಲಭಿಸಿರುವುದಾಗಿ ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ. ಹೀಗೆ  ಈತನ ಬ್ಯಾಂಕ್ ಖಾತೆಗೆ  ತಲುಪಿದ ಹಣವನ್ನು ಆತ ಆನ್‌ಲೈನ್ ವಂಚಕರಿಗೆ ಹಸ್ತಾಂತರಿಸಿದ್ದಾನೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಈ ವ್ಯಕ್ತಿಯ ಮೊಬೈಲ್ ಫೋನ್ ಪೊಲೀಸರು ವಶಕ್ಕೆ ತೆಗೆದುಕೊಂಡು ಪರಿಶೀಲಿಸಿದಾಗ ಅದರಲ್ಲಿರುವ  ವಾಟ್ಸಪ್ ಚಾಟ್‌ಗಳು ಹಾಗೂ ಆರ್ಥಿಕ ವ್ಯವಹಾರಗಳಿಗೆ ಸಂಬಂಧಪಟ್ಟ ಹಲವು ಸ್ಕ್ರೀನ್ ಶಾಟ್‌ಗಳನ್ನು ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ರೀತಿ ನೀಲೇಶ್ವರ ಪೊಲೀ ಸರು ನಡೆಸಿದ ಕಾರ್ಯಾಚರಣೆಯಲ್ಲಿ ನೀಲೇಶ್ವರ ತೆಕ್ಕೇಕಡಪ್ಪುರದ  23ರ ಹರೆಯದ ಯುವಕನೋರ್ವನ ಬ್ಯಾಂಕ್ ಖಾತೆಗೆ ಜುಲೈ 20ರಂದು 2 ಲಕ್ಷರೂ. ಆನ್‌ಲೈನ್ ಮೂಲಕ ತಲುಪಿರುವುದನ್ನು ಪತ್ತೆಹಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ತನಿಖೆಗೊಳಪಡಿಸಿದಾಗ  ತನ್ನ ಸ್ನೇಹಿತನಾದ ಶರೀಫ್ ಎಂಬಾತನ ಆಗ್ರಹದ ಮೇರೆಗೆ ತಾನು ಬ್ಯಾಂಕ್ ಖಾತೆ ತೆರೆದಿರುವುದಾಗಿಯೂ  ಅನಂತರ  ಆ ಖಾತೆಯ ಮೂಲಕ ಆರ್ಥಿಕ ವ್ಯವಹಾರ ನಡೆಸಲು ತಾನು ಆತನಿಗೆ ಒಪ್ಪಿಗೆ ನೀಡಿದ್ದೆನೆಂದು  ತಿಳಿಸಿದ್ದಾನೆ.  ಮಾತ್ರವಲ್ಲ ತನ್ನ ಬ್ಯಾಂಕ್‌ನ ಪಾಸ್ ಬುಕ್, ಚೆಕ್ ಪುಸ್ತಕ ಮತ್ತು ಎಟಿಎಂ ಕಾರ್ಡ್‌ನ್ನು ತಾನು ಆತನಿಗೆ ಹಸ್ತಾಂತರಿಸಿದ್ದೆ. ಅದಕ್ಕೆ ಪ್ರತಿಫಲವಾಗಿ ಆತ ತನಗೆ ಐದು ಸಾವಿರ ರೂ. ಕಮಿಶನ್ ನೀಡಿರುವುದಾಗಿಯೂ ಯುವಕ ಪೊಲೀಸರಲ್ಲಿ ತಿಳಿಸಿದ್ದಾನೆ.  ಆಪರೇಶನ್  ಸೈ ಪ್ರಕಾರ ಪೊಲೀಸರು ಜಿಲ್ಲೆಯಾದ್ಯಂತ ನಡೆಸಿದ ದಾಳಿ ಹಾಗೂ ಪರಿಶೀಲನೆಯ ಆಧಾರದಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಾಗಿ ಒಟ್ಟು ೨೬ ಪ್ರಕರ ಣಗಳನ್ನು ದಾಖಲಿಸಿಕೊಂಡಿದ್ದರು. ಆನ್‌ಲೈನ್ ವಂಚಕರಿಗೆ ಅವರ ಅಕ್ರಮ ಆರ್ಥಿಕ ವ್ಯವಹಾರಕ್ಕಾಗಿ ಬಾಡಿಗೆಗೆ ಬ್ಯಾಂಕ್ ಖಾತೆ ನೀಡುತ್ತಿರು ವವರ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

RELATED NEWS

You cannot copy contents of this page