ಕಾಸರಗೋಡು: ವಾಹನ ಅಪಘಾತದಲ್ಲಿ ಗಾಯಗೊಂಡಿರುವುದಾಗಿ ತಿಳಿಸಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೇಳೆ ಯುವಕ ಸಾವಿಗೀಡಾಗಲು ಕಾರಣ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿರುವುದಾಗಿದೆಯೆಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ. ಮೂಲತಃ ಕರ್ನಾಟಕದ ಬೆಂಗಳೂರು ನಿವಾಸಿಯೂ, ಪ್ರಸ್ತುತ ಕುಂಬಳೆ ಬಳಿಯ ಕಳತ್ತೂರಿನಲ್ಲಿ ವಾಸಿಸುತ್ತಿದ್ದ ಅಸ್ಲಾಂ ಭಾಷಾ (39) ಮೃತಪಟ್ಟ ವ್ಯಕ್ತಿ. ಇವರು ಅರ್ಬುದ ರೋಗಿಯಾಗಿದ್ದರೆಂದು ಹೇಳಲಾಗುತ್ತಿದೆ. ಮೂರು ದಿನಗಳ ಹಿಂದೆ ಇವರು ಕಾಲಿಗೆ ಗಾಯಗೊಂಡ ಸ್ಥಿತಿಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿದ್ದರು. ವಾಹನ ಅಪಘಾತದಲ್ಲಿ ಗಾಯಗೊಂಡಿರುವುದಾಗಿ ಅಸ್ಲಾಂ ಭಾಷಾ ಆಸ್ಪತ್ರೆ ಅಧಿಕಾರಿUಳಲ್ಲಿ ತಿಳಿಸಿದ್ದರೆನ್ನಲಾಗಿದೆ. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅಸ್ಲಾಂ ಭಾಷಾ ಅಲ್ಲಿಂದ ಕಳೆದ ಆದಿತ್ಯವಾರ ನಾಪತ್ತೆಯಾಗಿ ದ್ದರು. ಈ ಬಗ್ಗೆ ಆಸ್ಪತ್ರೆ ಅಧಿಕಾರಿಗಳು ನೀಡಿದ ದೂರಿನಂತೆ ನಗರಠಾಣೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಂತೆ ಸೋಮವಾರ ನಗರದ ಹೊಸ ಬಸ್ ನಿಲ್ದಾಣದಿಂದ ಅಸ್ಲಾಂ ಭಾಷಾ ಪತ್ತೆಯಾಗಿದ್ದರು. ಬಳಿಕ ಪೊಲೀಸರು ಮರಳಿ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದರು. ಅಂದು ರಾತ್ರಿ ಅಸ್ಲಾಂ ಭಾಷಾ ಮೃತಪಟ್ಟಿದ್ದರು.ಮೃತದೇಹವನ್ನು ಮೊಗ್ರಾಲ್ ಚಳಿಯಂಗೋಡು ಮಸೀದಿ ಪರಿಸರದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.






