ಅಕ್ರಮ ಹಣ ವರ್ಗಾವಣೆ ಪ್ರಕರಣ: 3.28 ಕೋಟಿ ರೂ.ಲಂಚ ಸ್ವೀಕಾರ ಆರೋಪ: ಕಾನೂನಿನ ಪದ್ಮವ್ಯೂಹದಲ್ಲಿ ಸಿಲುಕಿಕೊಂಡ ಪಿಣರಾಯಿ ವಿಜಯನ್

ಕೊಚ್ಚಿ: ಕೊಚ್ಚಿ ಕೇಂದ್ರೀಕರಿಸಿ ಕಾರ್ಯವೆಸಗುತ್ತಿರುವ ಗಣಿ ಕಂಪೆನಿಯಾದ ಕೊಚ್ಚಿನ್ ಮಿನರಲ್ಸ್ ಆಂಡ್ ರೂಟೈಲ್ ಲಿಮಿಟೆಡ್ (ಸಿಎಂಆರ್‌ಎಲ್) ಹಾಗೂ  ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಪುತ್ರಿ  ವೀಣಾ ವಿಜಯನ್  ಮಾಲಕತ್ವದಲ್ಲಿರುವ  ಎಕ್ಸಾಲೋಜಿಕ್ ಸೊಲ್ಯೂಶನ್ ಸಂಸ್ಥೆಯ ಮಧ್ಯೆ ನಡೆದಿದೆ ಎನ್ನಲಾಗಿರುವ  ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ  ವೀಣಾ ವಿಜಯನ್  ಮೂಲಕ ಪಿಣರಾಯಿ ವಿಜಯನ್ 3.28 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದೂ ಅದರ ಹೆಸರಲ್ಲಿ ಪಿಣರಾಯಿ ವಿಜಯನ್‌ರ ವಿರುದ್ಧ ಭ್ರಷ್ಟಾಚಾರ ತಡೆ ಕಾನೂನು ಪ್ರಕಾರ ಕೇಸು ದಾಖಲಿಸಬೇಕೆಂದು ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಜ್ಯಾರಿ ನಿರ್ದೇಶನಾಲಯ  (ಇ.ಡಿ) ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಿರುವುದು ಪಿಣರಾಯಿ ವಿಜಯನ್‌ರನ್ನು ಕಾನೂನಿನ ಪದ್ಮವ್ಯೂಹದಲ್ಲಿ ಸಿಲುಕುವಂತೆ ಮಾಡಿದೆ. ಈ ಪ್ರಕರಣದಲ್ಲಿ ಪಿಣರಾಯಿ ವಿಜಯನ್ ಮಾತ್ರವಲ್ಲ ಪುತ್ರಿ ವೀಣಾ ವಿಜಯನ್ ಮತ್ತು ಆಕೆಯ ಪತಿ ಮಾಜಿ ಸಚಿವ ಮುಹಮ್ಮದ್ ರಿಯಾಸ್ ವಿರುದ್ಧವೂ ಭ್ರಷ್ಟಾಚಾರ ತಡೆ ಕಾನೂನಿನ ಪ್ರಕಾರ ಕೇಸು ದಾಖಲಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸಲ್ಲಿಸಿದ ಪತ್ರದಲ್ಲಿ ಇ.ಡಿ ನಿರ್ದೇಶ ನೀಡಿದೆ.  

ಅಕ್ರಮ ಹಣ ವರ್ಗಾವಣೆ ಪ್ರಕರಣದ ಬಗ್ಗೆ ಇ.ಡಿ ಈಗಾಗಲೇ ತನಿಖೆ ನಡೆಸಿದ್ದು, ಅದರಂತೆ ಕಾಳಧನ ಬಿಳುಪುಗೊಳಿಸುವಿಕೆ ತಡೆ ಕಾನೂನಿನ ಸೆಕ್ಷನ್ 66(2) ಪ್ರಕಾರ ಪ್ರಕರಣ ದಾಖಲಿಸಿಕೊಂಡಿದೆ. ಈ ಪ್ರಕರಣದ ಬಗ್ಗೆ ಕೇರಳದ ವಿಜಿಲೆನ್ಸ್ ವಿಭಾಗ ತನಿಖೆ ನಡೆಸಿದಲ್ಲಿ  ತನಿಖಾ ತಂಡಕ್ಕೆ ನಮ್ಮ ತನಿಖಾ ವರದಿಯನ್ನು ಹಸ್ತಾಂತರಿಸಲು ಸಿದ್ಧವೆಂದೂ ಇ.ಡಿ ಹೇಳಿದೆ. ಈ ವ್ಯವಹಾರದಲ್ಲಿ ಮಾಜಿ ಸಚಿವ ಮುಹಮ್ಮದ್ ರಿಯಾಸ್ ಕೂಡಾ  ವೀಣಾ ವಿಜಯನ್‌ರಿಂದ ಲಂಚ ಸ್ವೀಕರಿಸಿದ್ದಾರೆ. ಆ ಹಣವನ್ನು  ಅವರು  ಆ ಹಣವನ್ನು ಪತ್ನಿ ಮತ್ತು ಇತರರ ಸಹಾಯದಿಂದ ದುಬಾಯಿಗೆ ಕಳುಹಿಸಿಕೊಟ್ಟಿರುವುದಾಗಿಯೂ  ಇ.ಡಿಯ ತನಿಖಾ ವರದಿಯಲ್ಲಿ ತಿಳಿಸಲಾಗಿದೆ.  ಸಿಪಿಆರ್‌ಎಲ್‌ನ ಎಂ.ಡಿ ಶಶಿಧರ ಕರ್ತಾ ಲಂಚ ನೀಡಿದ್ದರು. ಅದೇ ಸಂಸ್ಥೆಯ ನಿವೃತ್ತ ಸಿಎಫ್‌ಒ ಸುರೇಶ್ ಕುಮಾರ್ ಅದಕ್ಕೆ ಅಗತ್ಯದ ಸಹಾಯ ಒದಗಿಸಿದ್ದರು. ಹೀಗೆ ನೀಡಲಾದ ಲಂಚವನ್ನು ಪಡೆಯಲು ಮತ್ತು ಆ ಹಣವನ್ನು  ಸಾಗಿಸಲು ಶೈಜನ್ ಮುಹಮ್ಮದ್, ವಾರೀಸ್, ಪಿ. ನಿಖಿಲ್, ವಿ.ಪಿ. ಫೈಜಾಸ್ ಮತ್ತು ಎಂ. ನಂದುಲಾಲ್ ಎಂಬವರು ಸಹಾಯ ಒದಗಿಸಿದ್ದಾರೆಂದೂ ಇ.ಡಿ ನಡೆಸಿದ ತನಿಖಾ ವರದಿಯಲ್ಲಿ ತಿಳಿಸಲಾಗಿದೆ. ಮಾತ್ರವಲ್ಲ ಈ ಬಗ್ಗೆ ಸಮಗ್ರ ವಿಜಿಲೆನ್ಸ್ ತನಿಖೆ ನಡೆಸಬೇಕೆಂದು ಇ.ಡಿ ತನ್ನ ವರದಿಯಲ್ಲಿ ಶಿಫಾರಸ್ಸು ಮಾಡಿದೆ. ಇ.ಡಿ ಸಲ್ಲಿಸಿದ ವರದಿಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರು ರಾಜ್ಯ ಗೃಹಖಾತೆ ಕಾರ್ಯದರ್ಶಿಗೆ ಹಸ್ತಾಂತರಿಸಿದ್ದು, ಈ ವಿಷಯದಲ್ಲಿ ಕೈಗೊಳ್ಳಬೇಕಾಗಿರುವ ಕಾನೂನುಕ್ರಮಗಳ ಬಗ್ಗೆ ರಾಜ್ಯ ಸರಕಾರ ಶೀಘ್ರ ತೀರ್ಮಾನ ಕೈಗೊಳ್ಳಲಿದೆ.

RELATED NEWS

You cannot copy contents of this page